

ಚನ್ನರಾಯಪಟ್ಟಣ: ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಏಸುಕ್ರಿಸ್ತರ ಜನ್ಮದಿನ ಕ್ರಿಸ್‌ಮಸ್ ಹಬ್ಬವನ್ನು ಬುಧವಾರ ಪಟ್ಟಣದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ತಾಲೂಕಿನ ಹಲವು ಚರ್ಚ್‌ಗಳಲ್ಲಿ ಮೋಂಬತ್ತಿಗಳನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸಲಾಯಿತು.
ತಾಲೂಕಿನ ಆಲ್ಫೋನ್ಸ್ ನಗರದ ಸಂತ ಅಲ್ಫೋನ್ಸರ ಚರ್ಚ್ ಹಾಗೂ ತಾಲೂಕಿನ ವಿವಿಧ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕೇಕ್ ವಿತರಿಸುವ ಜತೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಜನರು ಸಂಭ್ರಮಿಸಿದರು. ಚರ್ಚ್‌ಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಕ್ರಿಸ್‌ಮಸ್ ಟ್ರೀ, ಬಣ್ಣ ಬಣ್ಣದ ಸ್ಟಾರ್ಸ್‌ಗಳು, ಕೃತಕ ಗೋದಲಿಗಳು, ಬಗೆಬಗೆಯ ಗ್ರೀಟಿಂಗ್ ಕಾರ್ಡ್‌ಗಳು, ವಿದ್ಯುತ್ ಅಲಂಕಾರಿಕ ಸಾಮಗ್ರಿ ಹಾಗೂ ಬಲೂನ್‌ಗಳು ಪಟ್ಟಣದ ಕ್ರೈಸ್ತ ಬಾಂಧವರ ಮನೆಗಳಲ್ಲಿ ರಾರಾಜಿಸಿದವು. ಕೇಕ್ ಹಾಗೂ ಚಾಕ್ಲೇಟ್ ಸವಿದ ಜನರು ಖುಷಿಪಟ್ಟರು. ಕ್ರೈಸ್ತರ ಮನೆಮನೆಗಳ ಎದುರು ಮಿನುಗುವ ಹಣತೆಗಳು, ಮೇಣದ ಬತ್ತಿಗಳು, ಗೂಡು ದೀಪಗಳು, ನಕ್ಷತ್ರಗಳು, ಕ್ರಿಸ್‌ಮಸ್ ವೃಕ್ಷದಲ್ಲಿ ಝಗಮಗಿಸುವ ಬಣ್ಣ ಬಣ್ಣದ ದ್ವೀಪಗಳು ಆಕರ್ಷಣೀಯವಾಗಿದ್ದವು. ಆಲ್ಫೋನ್ಸ್ ನಗರದ ಸಂತ ಅಲ್ಫೋನ್ಸರ ಚರ್ಚ್ ಆವರಣದಲ್ಲಿ ಯೇಸುಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಕೃತಕವಾಗಿ ರೂಪಿಸಿದ ಗೋದಲಿ ಎಲ್ಲರ ಗಮನ ಸೆಳೆಯಿತು. ಮಂಗಳವಾರ ಮಧ್ಯರಾತ್ರಿ ಹಾಗೂ ಬುಧವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಗಳು ನಡೆದವು.
ಸಾಮೂಹಿಕ ಬೈಬಲ್ ಪಠಣ: ತಾಲೂಕಿನ ಆಲ್ಫೋನ್ಸ್ ನಗರದ ಸಂತ ಅಲ್ಫೋನ್ಸರ ಚರ್ಚಿನಲ್ಲಿ ಬೈಬಲ್ ಪಠಣ ಮಾಡಲಾಯಿತು. ಏಸು ಕ್ರಿಸ್ತನ ಮಹಿಮೆ ಹಾಗೂ ಅವರ ಸಂದೇಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಯಿತು.
ಚರ್ಚ್‌ನ ಫಾದರ್ ಜೆ ಮೈಕಲ್ ಮರಿ ಮಾತನಾಡಿ, ಇದು ಮಾನವೀಯತೆಯ ಹಬ್ಬ. ದೇವರು ಮನುಷ್ಯತ್ವದೊಂದಿಗೆ ದೈವತ್ವವನ್ನು ಹಂಚಿಕೊಂಡು ಪ್ರೀತಿ ಮತ್ತು ಶಾಂತಿಯ ಪರಿಪೂರ್ಣತೆಯನ್ನು ಇಡೀ ವಿಶ್ವಕ್ಕೆ ಕಲಿಸಿಕೊಟ್ಟ ಹಬ್ಬ. ಮಾನವ ಸಂಬಂಧಗಳ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರುವ ಹಬ್ಬ ಎಂದರು.
ಗಾನವೃಂದದವರು ವಿಶೇಷ ಸಂಗೀತ ಪ್ರಸ್ತುತಪಡಿಸಿದರು. ಸಮುದಾಯದ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.