

ಶಶಿ ಕುತ್ಯಾಳ ಈಶ್ವರಮಂಗಲ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಬಹುತೇಕ ಸಂಪರ್ಕ ರಸ್ತೆಗಳು ಅಭಿವೃದ್ಧಿಗೊಂಡಿದ್ದರೂ ಕೆಯ್ಯೂರು ಗ್ರಾಮ ವ್ಯಾಪ್ತಿಯ ಸಂಪರ್ಕ ರಸ್ತೆಯೊಂದಕ್ಕೆ ಅಭಿವೃದ್ಧಿ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಇದರಿಂದಾಗಿ ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜನತೆ ಕೆಸರುಮಯ ರಸ್ತೆಯಲ್ಲಿ ಸಂಚರಿಸಿ ‘ಉಚಿತ ಮಡ್‌ಬಾತ್ ಸೇವೆ’ ಪಡೆಯುವಂತಾಗಿದೆ.
ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೆಯ್ಯೂರು ಗ್ರಾಮದ ಮೇರ್ಲನೂಜಿ - ಕೋಡಂಬು ರಸ್ತೆಯ ಬಹುತೇಕ ಭಾಗ ಇಂದಿಗೂ ಕಚ್ಚಾ ರಸ್ತೆಯಾಗಿಯೇ ಉಳಿದೆ. ಮಳೆಗಾಲದಲ್ಲಿ ಈ ಮಣ್ಣಿನ ರಸ್ತೆಯ ಕೆಲವು ಭಾಗಗಳು ಕೆಸರುಮಯವಾಗಿ ಕೆಸರುಗದ್ದೆಯಂತಗುತ್ತಿದೆ. ಇದೀಗ ಈ ರಸ್ತೆಯ ಕೆಲವು ಕಡೆಗಳಲ್ಲಿ ಕೆಸರುತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ಮಾತ್ರವಲ್ಲದೆ ಜನಸಂಚಾರಕ್ಕೂ ಕಷ್ಟಕರ ಸನ್ನಿವೇಶ ನಿರ್ಮಾಣವಾಗಿದೆ. ದ್ವಿಚಕ್ರ ಮತ್ತು ಭಾರಿ ವಾಹನಗಳ ಸಂಚಾರಕ್ಕೆ ತೀರಾ ತೊಂದರೆಯಾಗಿದೆ.
ಪುತ್ತೂರು - ಬೆಳ್ಳಾರೆ ರಸ್ತೆಯ ಕಟ್ಟತ್ತಾರು ಎಂಬಲ್ಲಿಂದ ಮೇರ್ಲನೂಜಿ ಮೂಲಕವಾಗಿ ಕೋಡಂಬು ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಸುಮಾರು 4 ಕಿ.ಮೀ. ದೂರದ ರಸ್ತೆಯಲ್ಲಿ 1 ಕಿ.ಮೀ.ನಷ್ಟು ರಸ್ತೆ ಭಾಗ ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿ ಕಂಡಿದೆ. ಉಳಿದ ರಸ್ತೆ ಕಚ್ಚಾ ರಸ್ತೆಯಾಗಿಯೇ ಉಳಿದಿದ್ದು, ವಾಹನ ಸಂಚಾರವೇ ತ್ರಾಸದಾಯಕವಾಗಿದೆ. ಮೇರ್ಲದ ಕೊನೆಯ ಭಾಗ, ಬಂಗಾರುಗುಡ್ಡೆ ತಿರುವು ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲದೆ ಕಚ್ಚಾ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕೆಸರುಮಯವಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಕೆಸರು ಸೋಕದಂತೆ ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ. ಅಲ್ಲದೆ ಪಾದಚಾರಿಗಳಿಗೆ ನಡೆದು ಹೋಗಲು ಕೂಡ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಕೆಸರುಮಯ ರಸ್ತೆ ಪಯಣ ಅನಿವಾರ್ಯ
ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗುವ ಮೇರ್ಲ - ನೂಜಿಕೋಡಂಬು ಭಾಗದಲ್ಲಿ 30ಕ್ಕೂ ಅಧಿಕ ಮನೆಗಳಿವೆ. ಬದಲಿ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಈ ಭಾಗದ ಪ್ರತಿದಿನ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮಸ್ಥರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ಹಲವು ಕಡೆಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲಲ್ಲಿ ಕೆಸರು ತುಂಬಿಕೊಂಡಿದೆ. ಆದರೂ ಬದಲಿ ಸಂಪರ್ಕ ವ್ಯವಸ್ಥೆ ಇಲ್ಲದಿರುವುದರಿಂದ ಈ ಭಾಗದ ಮಂದಿ ಕೆಸರುಮಯ ರಸ್ತೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸಮಸ್ಯೆಗೆ ಬೇಕಿದೆ ಶಾಸಕರ ಸ್ಪಂದನೆ
ಮೇರ್ಲನೂಜಿ - ಕೋಡಂಬು ರಸ್ತೆಯ 1 ಕಿ.ಮೀ. ರಸ್ತೆ ಭಾಗ ಮಾತ್ರ ಕಾಂಕ್ರೀಟೀಕರಣವಾಗಿದೆ. ಉಳಿದ ಕಚ್ಚಾ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಿಕೊಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ಶಾಸಕರು ಇನ್ನಾದರೂ ಇಲ್ಲಿನ ಮಂದಿ ಅನುಭವಿಸುತ್ತಿರುವ ಸಂಪರ್ಕ - ಸಂಚಾರ ಸಮಸ್ಯೆಯನ್ನು ಅರಿತುಕೊಂಡು ಸಮಸ್ಯೆಗೆ ಸ್ಪಂದನೆ ನೀಡಬೇಕು. ರಸ್ತೆಯನ್ನು ಸಂಪೂರ್ಣವಾಗಿ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಬಹುಕಾಲದ ಬೇಡಿಕೆ.
ಕಟ್ಟತ್ತಾರಿನಿಂದ ಮೇರ್ಲನೂಜಿ ಮೂಲಕವಾಗಿ ಕೋಡಂಬಿಗೆ ತೆರಳುವ ರಸ್ತೆ ಅಭಿವೃದ್ಧಿಗೆ ಈ ಹಿಂದೆ ಶಾಸಕರಾಗಿದ್ದ ಸಂಜೀವ ಮಠಂದೂರು 35 ಲಕ್ಷ ರೂ., ಮಲ್ಲಿಕಾ ಪ್ರಸಾದ್ 5 ಲಕ್ಷ ರೂ. ಮತ್ತು ಬಿಜೆಪಿ ಶಾಸಕಿಯಾಗಿದ್ದ ವೇಳೆ ಶಕುಂತಳಾ ಶೆಟ್ಟಿ ಅವರು 5 ಲಕ್ಷ ರೂ. ಅನುದಾನ ಒದಗಿಸಿದ್ದರು. ಈ ಅನುದಾನದಲ್ಲಿ 1 ಕಿ.ಮೀ.ಯಷ್ಟು ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಉಳಿದ ರಸ್ತೆಯ ಅಲ್ಲಲ್ಲಿ ಕೆಸರುತುಂಬಿದ್ದು, ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿದೆ . ಶರತ್ ಕುಮಾರ್ ಮಾಡಾವು ಕೆಯ್ಯೂರು ಗ್ರಾಪಂ ಅಧ್ಯಕ್ಷ