

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಆಯ್ಕೆ ಮತ್ತು ಅವಕಾಶ ವಂಚಿತರಿಗೆ ಒತ್ತಾಸೆ ಎಂಬ ಹೆಸರಿನಲ್ಲಿ ಸರ್ಕಾರಿ, ಅನುದಾನಿತ ಪ್ರೌಢ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತ ಪರಿಷತ್ ವತಿಯಿಂದ ನಗದು ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಅನುಕರಣೀಯ. ಜಾತಿ, ಧರ್ಮ ಮೀರಿ ಇಂಥ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಶೋತ್ತಮ ಬಿಳಿಮಲೆ ಹೇಳಿದರು.
ನಗರದ ಕನ್ನಡ ಜಾಗೃತ ಪರಿಷತ್ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆಯ್ಕೆ ಮತ್ತು ಅವಕಾಶ ವಂಚಿತರಿಗೆ ಒತ್ತಾಸೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದು ಸಾವಿರ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದ್ದರು. ಈಗ ಕೂಡ ಇಂಗ್ಲಿಷ್ ಶಾಲೆಗಳನ್ನು ತೆರೆಯಲು ಮನವಿ ಸಲ್ಲಿಸಲಾಗಿದೆ. ಅಧಿಕಾರಿ ಗಣದಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಿದೆ. ಶೇ.50ಕ್ಕಿಂತಲೂ ಹೆಚ್ಚು ಪಾಲಕರಲ್ಲಿ ಇಂಗ್ಲಿಷ್ ವ್ಯಾಮೋಹವಿದೆ. ಆದರೆ ಇಂಗ್ಲಿಷ್ ಕಲಿತರೆ ಮನೆಗೆ ಬಂದು ಯಾರೂ ಉದ್ಯೊಗ ಕೊಡುವುದಿಲ್ಲ. ಶೇ.47ರಷ್ಟು ಇಂಗ್ಲಿಷ್ ಕಲಿತವರಿಗೆ ಉದ್ಯೋಗವೇ ಇಲ್ಲ. ಇದಕ್ಕೆ ಪ್ರತಿಭೆ ಬೇಕು, ಕೌಶಲಗಳು ಬೇಕು. ಇದನ್ನು ಕಲಿಸುವುದರತ್ತ ಎಲ್ಲರ ಗಮನವಿರಬೇಕು. ಆದರೆ, ಯಾರಿಗೂ ಈ ಬಗ್ಗೆ ಲಕ್ಷ್ಯವೇ ಇಲ್ಲದಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ.ಎ.ಒ.ಆವಲಮೂರ್ತಿ ಮಾತನಾಡಿ, ಇಂಗ್ಲಿಷ್‌ನಿಂದ ಮಾತ್ರ ಬದುಕು ಸಮೃದ್ಧಿ ಎಂಬುದು ದೊಡ್ಡ ಸುಳ್ಳು. ಆದರೆ, ಅದನ್ನೇ ನಿಜ ಎಂದುಕೊಂಡಿದ್ದೇವೆ. ನಮ್ಮ ಶಾಲೆಗಳಲ್ಲಿ ಬಾಯಿಪಾಠದ ಸಂಸ್ಕೃತಿ ತೊಲಗಬೇಕು, ವಿದ್ಯಾರ್ಥಿಗಳನ್ನು ವಿವೇಚನಾಶಾಲಿಗಳನ್ನಾಗಿಸಬೇಕು ಎಂದರು.