

ಗುತ್ತಲ: ಲೋಕ ಕಲ್ಯಾಣಾರ್ಥ ಹಾಗೂ ಸರ್ವಜನಾಂಗದ ಶ್ರೇಯಸ್ಸಿಗಾಗಿ 21 ದಿನಗಳ ಪರ್ಯಂತ ಮೌನಾನುಷ್ಠಾನ ಕೈಗೊಳ್ಳಲಾಗುತ್ತಿದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನೆಗಳೂರ ಗ್ರಾಮದ ಶ್ರೀ ಮಠದಲ್ಲಿ ಅನುಷ್ಠಾನ ಪ್ರಯುಕ್ತ ಏರ್ಪಡಿಸಿದ್ದ ಪೂಜಾಕೈಂಕರ್ಯ ನೇರವೇರಿಸಿ ಅವರು ಮಾತನಾಡಿದರು. ಅನ್ನದಾತರ ಸಂಕಷ್ಟ ನಿವಾರಣೆ ಹಾಗೂ ಶ್ರೀ ಮಠದ ಶಿಷ್ಯರ ಶ್ರೇಯಸ್ಸಿಗಾಗಿ 11ನೇ ಮೌನಾನುಷ್ಠಾನವನ್ನು 21 ದಿನಗಳ ಕಾಲ ಕೈಗೊಳ್ಳುತ್ತಿದ್ದೇವೆ. ಲೌಕಿಕ ಜೀವನದ ವ್ಯವಸ್ಥೆಯ ಸಂಪರ್ಕ ಕಳೆದುಕೊಂಡು ಅಲೌಕಿಕತೆಯಡೆಗೆ ಸಾಗುವುದೇ ಅನುಷ್ಠಾನವಾಗಿದೆ. ಗುರುಗಳು ಅನುಷ್ಠಾನ ಮಾಡುವುದರ ಫಲ ಇಡೀ ನಾಡಿಗೆ ಸಲ್ಲಲಿದೆ. ಈ ಹಿನ್ನಲೆಯಲ್ಲಿ ಶ್ರೀ ಮಠದಲ್ಲಿ ಅನುಷ್ಠಾನ ಕೈಗೊಂಡಿದ್ದು, ತ್ರಿಕಾಲದಲ್ಲಿ ರುದ್ರಾಭಿಷೇಕ ಅಷ್ಟೋತ್ತರ ಜಪ ಧ್ಯಾನಾದಿಗಳು ಜರುಗಲಿದೆ. ಆ. 16ರಂದು ಅನುಷ್ಠಾನ ಮಂಗಲಗೊಳ್ಳುವುದು. ಈ ಸಮಯದಲ್ಲಿ ಯಾರಿಗೂ ದರ್ಶನ ಇರುವುದಿಲ್ಲ ಎಂದರು.
ಇದಕ್ಕೂ ಮುನ್ನ ಶ್ರೀಗಳು ಗ್ರಾಮದ ಹೊಂಡಕ್ಕೆ ತೆರಳಿ ಗಂಗಾ ಪೂಜೆ ನೇರವೇರಿಸಿದರು. ಅಗ್ರೋಧಕ ಕುಂಭವನ್ನು ತೆಗೆದುಕೊಂಡು ಬಂದು ಶ್ರೀಮಠದ ಗದ್ದುಗೆಗಳಿಗೆ ಷೋಡಶೋಪಚಾರ ಅಷ್ಟೋತ್ತರ ಮಹಾ ಮಂಗಳಾರತಿ ಬೆಳಗಿದರು.
ಶ್ರೀಮಠದ ಸೇವಾ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಲಣ್ಣನವರ, ಉಪಾಧ್ಯಕ್ಷ ಹುಚ್ಚುಸಾಬ್ ನದಾಫ್, ದೊಡ್ಡಬಸನಗೌಡ ಸುಕುಳಿ, ಕೃಷ್ಣರೆಡ್ಡಿ ಚಪ್ಪರದ, ಶಂಭುಲಿಂಗಯ್ಯ ಮಠದ, ಈಶ್ವರ ಶಿಡೇನೂರ, ಕೊಟ್ರೇಶ ಮಠದ, ರಾಜಶೇಖರ ವಿಭೂತಿ, ಸುರೇಶಬಾಬು ಚಕ್ರಸಾಲಿ, ಮಾಲತೇಶ ಅಂಗಡಿ, ಬಸವರಾಜ ಗುಂಜಾಳ, ದಯಾನಂದ ಕಟ್ಟೆಪ್ಪನವರ, ಕುಮಾರ ಮಾಹೂರ, ಹನುಮಂತಪ್ಪ ದೊಡ್ಡೀರಪ್ಪನವರ, ವೀರೇಶ ಗಿರಿಯಣ್ಣನವರ, ಅರುಣ ರಿತ್ತಿಮರಿಯಣ್ಣನವರ, ಸೋಮಶೇಖರೆಡ್ಡಿ ಮೈದೂರ ಇತರರು ಇದ್ದರು.