

ರಾಯಚೂರು: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಪುಣ್ಯದ ಲ ದೊರೆಯುತ್ತಿದ್ದು, ಅದರಲ್ಲೂ ನವರಾತ್ರಿಯ 9 ದಿನಗಳ ಕಾರ್ಯಕ್ರಮ, ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ 28 ಜನ್ಮದ ಪುಣ್ಯ ದೊರೆಯುತ್ತದೆ ಎಂದು ಸೋಮವಾರಪೇಟೆ ಹಿರೇಮಠ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಡ್ಯಾಡಿ ಕಾಲನಿಯ ಈಶ್ವರ ದೇವಸ್ತಾನದಲ್ಲಿ ನವರಾತ್ರಿ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಉಡಿ ತುಂಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಣ್ಯವಂತರಿಗೆ ಮಾತ್ರ ದೇವಿಯ ಅನುಗ್ರಹ ದೊರೆಯುತ್ತದೆ ಎಂದರು.
ಮಹಿಳೆಯರು ನವರಾತ್ರಿಯ 9 ದಿನಗಳ ಕಾಲ ದೇವಿಯ ಆರಾಧನೆ ಮಾಡುವುದರಿಂದ ದೇವಿ ಕೃಪೆಯಿಂದ ಮನೆಯಲ್ಲಿ ನೆಮ್ಮದಿ, ಸಂತೋಷ, ಐಶ್ವರ್ಯ ಕಾಣುತ್ತದೆ. ನಿಷ್ಠೆ, ಭಕ್ತಿಯಿಂದ ದೇವಿಯ ಪೂಜೆ ಮಾಡುವ ಮೂಲಕ ಅನುಗ್ರಹ ಪಡೆಯಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದ್ದು, ಹೀಗಾಗಿ ಭೂಮಿ, ನದಿಗಳಿಗೆ ಮಹಿಳೆಯರ ಹೆಸರಿಡಲಾಗಿದೆ. ಮಹಿಳೆಯರಲ್ಲಿ ಸಂಸ್ಕಾರ, ಸಂಸ್ಕೃತಿ ಇರುತ್ತಿದ್ದು, ಅವರಿಂದಾಗಿ ಸಮಾಜ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿದೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಮಾತನಾಡಿ, ಮಹಿಳೆಯರ ಶ್ರೇಯಸ್ಸಿಗಾಗಿ ಉಡಿ ತುಂಬುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ದೊಡ್ಡ ಶರಣಪ್ಪಗೌಡ ಗಾರಲದಿನ್ನಿ, ಮಹಾಂತಯ್ಯ ಸ್ವಾಮಿ, ಉದಯಕುಮಾರ ಯಾಪಲದಿನ್ನಿ, ವಿರುಪನಗೌಡ ಬಂಡಿ, ರಾಚನಗೌಡ ಕೋಳೂರು, ಪರಮೇಶ್ವರಪ್ಪ ಸಾಲಿಮಾಟ, ಅರ್ಚಕ ನಾಗಯ್ಯಸ್ವಾಮಿ ಉಪಸ್ಥಿತರಿದ್ದರು.