

ಹರೀಶ್ ಮೋಟುಕಾನ
ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರು ಬಂಡಿ. ಹಿರಿಯರಿಗೆ ವಿಶ್ರಮಿಸಲು ಕಲ್ಲು ಬೆಂಚುಗಳು, ವಾಕಿಂಗ್‌ಗೆ ಟ್ರಾೃಕ್, ಕುಡಿಯಲು ನೀರಿನ ವ್ಯವಸ್ಥೆ … ಹೀಗೆ ಸುಮಾರು ಒಂದು ಎಕರೆ ಜಾಗದಲ್ಲಿ ಇರಲು ಎಲ್ಲವೂ ಇವೆ. ಆದರೆ ನಿರ್ವಹಣೆ ಇಲ್ಲದೆ ಆಳೆತ್ತರಕ್ಕೆ ಕಾಡು ಬೆಳೆದು ನಿಂತಿದೆ. ಗೇಟುಗಳು ತುಕ್ಕು ಹಿಡಿದು ಹೋಗಲು ಆರಂಭವಾಗಿದೆ.
ಇದು ಮಂಗಳೂರು ಮೇರಿಹಿಲ್ ಬಳಿಯ ಗುರುನಗರದ ವ್ಯಾಲಿ ವ್ಯೆ ಬಡಾವಣೆಯಲ್ಲಿ ಮಹಾಬಲ ಮಾರ್ಲ ಮೇಯರ್ ಆಗಿದ್ದಾಗ ಈ ಸಾರ್ವಜನಿಕ ಉದ್ಯಾನವನ ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ಇದರ ದುಸ್ಥಿತಿಯನ್ನು ನೋಡಿದ ಸ್ಥಳೀಯರು ಪಾಲಿಕೆಯನ್ನು ಕಾಯದೆ ತಾವೇ ಇದನ್ನು ಸುಂದರಗೊಳಿಸಲು ಪಣ ತೊಟ್ಟಿದ್ದಾರೆ.
ಪೃಥ್ವಿ ಚಾರಿಟೇಬಲ್ ಟ್ರಸ್ಟ್ ಹಾಗೂ ಜೋಗರ್ಸ್ ಪಾರ್ಕ್ ಸದಸ್ಯರ ನೇತೃತ್ವದಲ್ಲಿ ಪ್ರತೀ ಭಾನುವಾರ ಶ್ರಮದಾನದ ಮೂಲಕ ಶುಚಿಗೊಳಿಸುವ ಕೆಲಸ ಆರಂಭಗೊಂಡಿದೆ. ಈ ವಾರ್ಡ್‌ನ್ನು ಪ್ರತಿನಿಧಿಸುತ್ತಿರುವ ಮನಪಾ ಸದಸ್ಯ ಹಾಗೂ ಮಾಜಿ ಮೇಯರ್ ಜಯಾನಂದ ಅಂಚನ್ ಮಾತ್ರ ಇತ್ತ ಗಮನ ವಹಿಸಿಲ್ಲ. ಪಾಲಿಕೆ ಇನ್ಯಾವುದಕ್ಕೋ ಕೋಟ್ಯಂತರ ರೂಪಾಯಿ ವ್ಯಯಿಸುವಾಗ ಪಾಳು ಬಿದ್ದ ಇಂತಹ ಪಾರ್ಕ್‌ಗಳ ಅಭಿವೃದ್ಧಿ ಬಗ್ಗೆ ನಿರಾಸಕ್ತಿ ವಹಿಸಿರುವ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪೃಥ್ವಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಲೋಲಾಕ್ಷಿ ಫರ್ನಾಂಡಿಸ್, ಪರಿಸರವಾದಿ ಕೃಷ್ಣಪ್ಪ, ಅಕ್ಷಯ ಶೆಣೈ, ಹೆಲಿಪ್ಯಾಡ್‌ನ ಜೋಗರ್ಸ್ ಪಾರ್ಕ್‌ನ ಸದಸ್ಯರಾದ ನಾಗೇಶ್ ರಾವ್ ಕಲ್ಯಾಣಪುರ, ಮಂಜುನಾಥ ನಿಸರ್ಗ, ಕಿಶೋರ್, ಮಂಜುನಾಥ್ ಹಾಸನ, ಶಮಿತ್ ಸುವರ್ಣ, ರಾಜನ್, ರಾಧಾಕೃಷ್ಣ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿ ಉದ್ಯಾನವನದ ಕಾಡು ತೆಗೆದು ಶುಚಿಗೊಳಿಸುವ ಪಣ ತೊಟ್ಟಿದ್ದಾರೆ. ಜತೆಗೆ ಸ್ಥಳೀಯ ನಿವಾಸಿಗಳು ಕೈ ಜೋಡಿಸಿದ್ದಾರೆ.
ಪೃಥ್ವಿ ಚಾರಿಟೇಬಲ್ ಟ್ರಸ್ಟ್, ಜೋಗರ್ಸ್ ಪಾರ್ಕ್ ಸದಸ್ಯರು ಹಾಗೂ ಸ್ಥಳೀಯರೊಂದಿಗೆ ಸೇರಿ ಪಾಳು ಬಿದ್ದ ಸಾರ್ವಜನಿಕ ಉದ್ಯಾನವನಕ್ಕೆ ಜೀವ ಕಳೆ ತುಂಬುವ ಕೆಲಸ ಆರಂಭಿಸಿದ್ದೇವೆ. ದಾನಿಗಳ ನೆರವಿನಿಂದ ಕಲ್ಲು ಬೆಂಚುಗಳಿಗೆ, ಆಟೋಟ ಸಾಮಗ್ರಿಗಳಿಗೆ ಪೈಂಟಿಂಗ್ ಮಾಡಿಸಲಾಗುವುದು. ವಿವಿಧ ಜಾತಿಯ ಹಣ್ಣು ಹಾಗೂ ಹೂವಿನ ಗಿಡಗಳನ್ನು ನೆಡುವ ಯೋಜನೆ ಇದೆ.
ಲೋಲಾಕ್ಷಿ ಫರ್ನಾಂಡಿಸ್
ಅಧ್ಯಕ್ಷೆ, ಪೃಥ್ವಿ ಚಾರಿಟೇಬಲ್ ಟ್ರಸ್ಟ್
ಮೇರಿಹಿಲ್ ಗುರುನಗರದ ವ್ಯಾಲಿ ವ್ಯೆ ಬಡಾವಣೆಯಲ್ಲಿ ಮಹಾನಗರ ಪಾಲಿಕೆ ನಿರ್ಮಾಣ ಮಾಡಿದ ಈ ಪಾರ್ಕ್ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಸಾರ್ವಜನಿಕರಿಗೆ ಉಪಯೋಗ ಆಗಲಿ ಎನ್ನುವ ಉದ್ದೇಶದಿಂದ ಅದನ್ನು ಶುಚಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸ್ಥಳೀಯರು ಪೂರ್ಣ ಸಹಕಾರ ನೀಡಬೇಕು.
ನಾಗೇಶ್ ರಾವ್ ಕಲ್ಯಾಣಪುರ
ಜೋಗರ್ಸ್ ಪಾರ್ಕ್ ಸದಸ್ಯರು
ಮಹಾನಗರ ಪಾಲಿಕೆ ನಿರ್ಮಾಣ ಮಾಡಿದ ಪಾರ್ಕ್ ಹಲವು ವರ್ಷಗಳಿಂದ ಪಾಳು ಬಿದ್ದಿರುವುದನ್ನು ನೋಡಿದಾಗ ಮನಸ್ಸಿಗೆ ಬೇಸರವಾಗಿತ್ತು. ಈ ಬಗ್ಗೆ ವಿಷಯ ತಿಳಿಸಿದಾಗ ಪೃಥ್ವಿ ಚಾರಿಟೇಬಲ್ ಟ್ರಸ್ಟ್ ಹಾಗೂ ಜೋಗರ್ಸ್ ಪಾರ್ಕ್ ಸದಸ್ಯರು ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.
ಕಿಶೋರ್
ಸ್ಥಳೀಯ ನಿವಾಸಿ