ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನ

mng-july17-zp2
Published on

ಮಂಗಳೂರು: ಕರಾವಳಿ ಜಿಲ್ಲೆಯ ಪ್ರಮುಖ ಬೇಡಿಕೆಯಾದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಸಾಧಕ ಭಾದಕಗಳ ಕುರಿತಂತೆ ಸಮಗ್ರ ವರದಿ ಮುಂದಿನ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ದ.ಕ. ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಮಂಗಳೂರು ರೈಲ್ವೆ ವಿಷಯಗಳ ಕುರಿತಂತೆ ಆಯೋಜಿಸಲಾದ ಅಧಿಕಾರಿಗಳು, ಜನಪ್ರತಿನಿಧಿ, ರೈಲು ಬಳಕೆದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಂಕಣ ರೈಲ್ವೆ ವಿಲೀನ ಕುರಿತಂತೆ ಕೊಂಕಣ, ನೈರುತ್ಯ ಹಾಗೂ ದಕ್ಷಿಣ ರೈಲ್ವೆ ವಿಭಾಗಗಳ ಹಿರಿಯ ಅಧಿಕಾರಿಗಳ ಸಮಿತಿ ಮಾಡಲಾಗಿದೆ. ಈ ಸಮಿತಿಯು ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ರೈಲ್ವೆ ಬಳಕೆದಾರರ ಜತೆ ಚರ್ಚಿಸಿ ತಾಂತ್ರಿಕವಾಗಿ ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತಾದ ವರದಿಯನ್ನು ನೀಡಬೇಕು. ಇದಾದ ಬಳಿಕ ಕರಾವಳಿಯಲ್ಲಿ ಕೇಂದ್ರವಾಗಿರಿಸಿ ಪ್ರತ್ಯೇಕ ರೈಲ್ವೆ ವಿಭಾಗ ಆರಂಭಿಸಲು ಯೋಜನೆ ರೂಪಿಸುವಂತೆ ತಿಳಿಸಿದರು.

ಸಂಸದ ಕ್ಯಾ. ಬ್ರಜೇಶ್ ಚೌಟ ಮಾತನಾಡಿ, ಮಂಗಳೂರಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ರೈಲ್ವೆ ವಿಭಾಗಗಳು ಒಳಗೊಂಡಿರುವುದರಿಂದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವುದು ಅಗತ್ಯ. ಜತೆಗೆ ಸುರತ್ಕಲ್, ಮುಲ್ಕಿ ರೈಲು ನಿಲ್ದಾಣದ ಜಂಕ್ಷನ್‌ಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು. ರೋರೋ ಸರ್ವಿಸ್ ಸುರತ್ಕಲ್‌ನಿಂದ ತೋಕೂರು ಸ್ಟೇಷನ್‌ಗೆ ಸ್ಥಳಾಂತರಿಸಬೇಕು, ಮಂಗಳೂರಿನಿಂದ ರಾಜ್ಯ ರಾಜಧಾನಿಯನ್ನು ರೈಲಿನಲ್ಲಿ ಸಂಪರ್ಕಿಸಲು ಪ್ರಸಕ್ತ 11 ಗಂಟೆಗಳು ಬೇಕು. ಸಮಯ ಕಡಿತಗೊಳಿಸುವ ಸಲುವಾಗಿ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸಲು ಸಾಧ್ಯತೆ ಹಾಗೂ ಆರ್ಥಿಕ ಅಧ್ಯಯನ ಆಗಬೇಕು. ಮಂಗಳೂರು ಸುಬ್ರಹ್ಮಣ್ಯ ನಡುವೆ ಪ್ರಯಾಣಿಕ ರೈಲು ಪುನರಾರಂಭಿಸಬೇಕು. ರೈಲು ನಿಲ್ದಾಣದ ಮ್ಯಾನೇಜರ್‌ರಿಂದ ಕ್ಯಾಂಟೀನ್ ನಡೆಸಲು ಕನ್ನಡ ಮಾತನಾಡುವ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಮತ್ಸ್ಯಗಂಧ ರೈಲುಗಳ ಹಳೆ ಕೋಚ್‌ಗಳನ್ನು ಬದಲಾಯಿಸಬೇಕು ಮತ್ತು ಈ ರೈಲು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ, ಕೊಂಕಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್, ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್.ಎನ್. ಸಿಂಗ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಇದ್ದರು.

------------------------

ರೋರೋ ಸೇವೆ ಸ್ಥಳಾಂತರಿಸಲು ರಾಜ್ಯ ಸಹಕಾರ ಅಗತ್ಯ

ಕೊಂಕಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್ ಮಾತನಾಡಿ, ನಮ್ಮ ವಿಭಾಗವು ಈಗಾಗಲೇ ಮೂರು ತಿಂಗಳಿಗೊಮ್ಮೆ ಸಭೆಗಳನ್ನು ನಡೆಸುತ್ತಿದೆ. ಮುಂದೆ ಸಂಸದರು, ಶಾಸಕರನ್ನು ಒಳಗೊಂಡು ಆಗಸ್ಟ್‌ನಿಂದಲೇ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಉಡುಪಿ ರೈಲ್ವೆ ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಷನ್‌ನಡಿ ಅಭಿವೃದ್ಧಿಗೆ ಕಳೆದ ವರ್ಷ ಘೋಷಣೆಯಾಗಿದ್ದು, ಅನುದಾನ ಇನ್ನೂ ಬಂದಿಲ್ಲ. ಕಾರವಾರ ನಿಲ್ದಾಣದಲ್ಲಿ 4 ಕೋಟಿ ರೂ.ಗಳಲ್ಲಿ ಪ್ರಯಾಣಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸುರತ್ಕಲ್‌ನಿಂದ ರೋರೋ ಸೇವೆಯನ್ನು ತೋಕೂರಿಗೆ ಸ್ಥಳಾತರಿಸಲು ಭೂಮಿಯ ಅಗತ್ಯವಿದ್ದು, ರಾಜ್ಯ ಸರ್ಕಾರ ಸಹಕರಿಸಬೇಕು ಎಂದರು.

---------------------

ಮೂರು ವರ್ಷ ವಿಶ್ವದರ್ಜೆಯ ರೈಲ್ವೆ ಕೇಂದ್ರ ಸಿದ್ಧ

ಪಾಂಡೇಶ್ವರ ರೈಲ್ವೆ ಕ್ರಾಸಿಂಗ್‌ನಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಆ ಪ್ರದೇಶದಲ್ಲಿ ರೈಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆಯ ಅಧ್ಯಯನ ನಡೆಸಿ ಕ್ರಮ ವಹಿಸಲಾಗುವುದು. ಮಂಗಳೂರು ಸೆಂಟ್ರಲ್ ವಿಶ್ವದರ್ಜೆಯ ರೈಲ್ವೆ ಕೇಂದ್ರವನ್ನಾಗಿಸಲು ಪ್ರಕ್ರಿಯೆಗಳು ನಡೆಯುತ್ತಿದ್ದು, 6 ತಿಂಗಳಲ್ಲಿ ಟೆಂಡರ್ ಆಗಿ, ಮುಂದಿನ ಮಾಚ್‌ರ್- ಎಪ್ರಿಲ್‌ನಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಮೂರು ವರ್ಷಗಳ ಅವಧಿಯಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದು ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್.ಎನ್. ಸಿಂಗ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net