

ಮೈಸೂರು: ಹಿರಿಯರ ಅನುಭವ ಸಮಾಜಕ್ಕೆ ಮಾರ್ಗದರ್ಶಕವಾಗಿರಬೇಕು. ‘ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಬಗು’ ಎಂಬ ಮಾತಿನಂತೆ ಹಿರಿಯರು ಮತ್ತು ಕಿರಿಯರು ಒಟ್ಟಾಗಿ ಇದ್ದಾಗ ಮಾತ್ರ ಸಮತೋಲನ ಸಮಾಜ ಕಟ್ಟಲು ಸಾಧ್ಯ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ಹಿರಿಯ ನಾಗರಿಕರ ಒಕ್ಕೂಟದ ವತಿಯಿಂದ ನಗರದ ಕಲಾಮಂದಿರದಲ್ಲಿ ಆಯೋಜಿಸಿರುವ ಎರಡು ದಿನಗಳ 20ನೇ ರಾಷ್ಟ್ರೀಯ ಹಿರಿಯ ನಾಗರಿಕರ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಹಿರಿಯರ ಮಾರ್ಗದರ್ಶನ ಇರಬೇಕು. ಕಿರಿಯರು ಅದನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದರು.
ಮಕ್ಕಳು ಪ್ರತ್ಯೇಕವಾಗಿ ಜೀವಿಸಲು ಬಯಸುತ್ತಾರೆ. ತಮ್ಮ ಪಾಲಕರಿಗೆ ಎಷ್ಟು ಬೇಕಾದರೂ ಹಣ ನೀಡುತ್ತೇವೆ ಎನ್ನುತ್ತಾರೆ. ಆದರೆ, ತಂದೆ, ತಾಯಿ ಮಕ್ಕಳ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಾರೆ ಎಂದು ತಿಳಿಸಿದರು.
ಮನುಷ್ಯನಿಗೆ ವಯಸ್ಸು ಎಷ್ಟು ಎನ್ನುವುದು ಮುಖ್ಯವಲ್ಲ. ಉತ್ಸಾಹ ಎಷ್ಟಿದೆ ಎನ್ನುವುದು ಮುಖ್ಯ. ಜನಸಂಖ್ಯೆ ಕಾರಣದಿಂದ ನಮ್ಮ ದೇಶದಲ್ಲಿ ನಿವೃತ್ತಿ ಪದ ಬಳಸುತ್ತೇವೆ. ಆದರೆ ಜನಸಂಖ್ಯೆ ಕಡಿಮೆ ಇರುವ ವಿದೇಶಗಳಲ್ಲಿ ಕೆಲಸದಿಂದ ನಿವೃತ್ತಿ ಇಲ್ಲ. ಮನಸ್ಸು ಸಾಕು ಎನ್ನುವವರೆಗೂ ಕೆಲಸ ಮಾಡುತ್ತಾರೆ. ಇಲ್ಲಿ ಕೆಲಸದಿಂದ ನಿವೃತ್ತಿಯಾದಾಗ ಬದುಕಿನ ಉಳಿದ ಸಮಯ ಪ್ರವೃತ್ತನಾಗಿ ಹೆಚ್ಚಿನ ಕೆಲಸ ಮಾಡಲು ಸಿಕ್ಕ ಅವಕಾಶ ಎಂದು ತಿಳಿಯಬೇಕು ಎಂದು ಸಲಹೆ ನೀಡಿದರು.
ಮನುಷ್ಯ ಸಂತೋಷದಿಂದ ಇರುವುದು ಬಹಳ ಮುಖ್ಯ. ಸ್ಥಳ ಮುಖ್ಯವಲ್ಲ, ಎಲ್ಲಿದ್ದೇವೆ ಎನ್ನುವುದು ಮುಖ್ಯವಲ್ಲ, ಬದಲಿಗೆ ಹೇಗೆ ಮತ್ತು ಎಷ್ಟು ಸಂತೋಷದಿಂದ ಇರುತ್ತೇವೆ ಎನ್ನುವುದು ಮುಖ್ಯ. ನಾನು ಹೇಳಿದಂತೆ ಕೇಳಬೇಕು ಎನ್ನುವುದನ್ನು ಬಿಟ್ಟರೆ ಜಗತ್ತಿನಲ್ಲಿ ಎಲ್ಲರೂ ಸಂತೋಷದಿಂದ ಜೀವಿಸಬಹುದಾಗಿದೆ. ಒಳ್ಳೆಯದು, ಕೆಟ್ಟದು ಎಲ್ಲವನ್ನೂ ಸಂತೋಷದಿಂದ ಸ್ವೀಕರಿಸಬೇಕು ಎಂದರು.
ಮನುಷ್ಯ ಸಮತೋಲನ ಆಹಾರ ಸೇವನೆ, ಯೋಗ ಸೇರಿದಂತೆ ಆರೋಗ್ಯ ಸುಧಾರಿಸಲು ಬೇಕಾದ ದಿನಚರಿ ರೂಢಿಸಿಕೊಳ್ಳಬೇಕು. ಔಷಧಗಳಿಲ್ಲದೆ ಆರೋಗ್ಯ ಕಾಪಾಡಿಕೊಳ್ಳುವುದನ್ನು ಕಲಿಯಬೇಕು. ಜತೆಗೆ, ಜೀವನ ಶೈಲಿ ಬದಲಾಯಿಸಿಕೊಳ್ಳುವುದೂ ಮುಖ್ಯ. ಔಷಧ ಇಲ್ಲದೆ ಆರೋಗ್ಯ ಕಾಪಾಡಿಕೊಳ್ಳಬಹುದಾದ ಅನೇಕ ಪ್ರಯೋಗ ಮತ್ತು ಸಂಶೋಧನೆಗಳು ನಡೆದಿವೆ. ಆ ಪ್ರಯೋಗಗಳಿಂದ ಬಂದಿರುವ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಂಡರೆ ಭೀಷ್ಮಾಚಾರ್ಯರಂತೆ ಇಚ್ಛಾಮರಣಿ ಆಗಬಹುದು ಎಂದರು.
ಅಖಿಲ ಭಾರತ ಹಿರಿಯ ನಾಗರಿಕರ ಒಕ್ಕೂಟದ ಕರ್ನಾಟಕ ಶಾಖೆ ಇದೀಗ ಉದ್ಘಾಟನೆಯಾಗಿದ್ದು, ನಾವೆಲ್ಲರೂ ಇಲ್ಲಿ ಒಳ್ಳೆಯ ಕಾರ್ಯಕ್ರಮದಲ್ಲಿ ಸೇರಿದ್ದೇವೆ. ದೇಶದ ನಾನಾ ಕಡೆಯಿಂದ ಹಿರಿಯ ನಾಗರಿಕರ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಹಿರಿಯ ನಾಗರಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯುವುದು ಸಮಾವೇಶದ ಉದ್ದೇಶವಾಗಿರುವುದು ಖುಷಿಯ ವಿಚಾರ ಎಂದರು.
ಖ್ಯಾತ ವೈದ್ಯ ಡಾ.ರವಿ ಪಾಟೀಲ್ ಮಾತನಾಡಿ, ಹಿರಿಯರು ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಊಟ-ತಿಂಡಿ ಮಾಡುವಂತೆ ಮನವಿ ಮಾಡಿದರು. ಹೆಚ್ಚು ಕುರುಕಲು ತಿಂಡಿಗಳ ಮೊರೆ ಹೋಗದೆ ಉತ್ತಮ ಪೌಷ್ಟಿಕಾಂಶ ಆಹಾರ ಸೇವಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಯೋಸಹಜ ಕಾಯಿಲೆಗಳು ಬಾರದಂತೆ ಜೀವನ ಶೈಲಿ ರೂಪಿಸಿಕೊಳ್ಳಬೇಕು. ಮೊಮ್ಮಕ್ಕಳೊಂದಿಗೆ ಸಾಧ್ಯವಾದಷ್ಟು ಹೆಚ್ಚು ಸಮಯ ಕಳೆಯಬೇಕು ಎಂದು ಸಲಹೆ ನೀಡಿದರು.
ಸಮ್ಮೇಳನದ ರಾಷ್ಟ್ರೀಯ ಅಧ್ಯಕ್ಷ ವಿಶ್ವಾಸ್‌ರಾವ್ ಭಾದನೆ, ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ರವೀಂದ್ರನಾಥ್, ಪದಾಧಿಕಾರಿಗಳಾದ ಹೊಬ್ಬಯ್ಯ, ಎ.ವೈ.ಬೆಂಡಿಗೇರೆ, ಮುಡಕವಿ ಇತರರಿದ್ದರು.
ಇದಕ್ಕೂ ಮುನ್ನ ಒಕ್ಕೂಟದ ಹಿರಿಯ ಸದಸ್ಯ ರಾಮನ್ ಅವರನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮ್ಮೇಳನದಲ್ಲಿ ದೇಶದ 25ಕ್ಕೂ ಹೆಚ್ಚು ರಾಜ್ಯಗಳ ಹಿರಿಯ ನಾಗರಿಕ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.