

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುವಕರ ಗುಂಪು ಬುದ್ಧಿಮಾಂದ್ಯನಿಗೆ ಕಲ್ಲೆಸೆದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಇಲ್ಲಿನ ಹೊಸ ಎಪಿಎಂಸಿ ಬಳಿಯ ಮೇದಾರ ಓಣಿಯಲ್ಲಿ ಗುರುವಾರ ಸಂಜೆ ನಡೆದಿದೆ. ಇಲಯಾಸ್ ಮಕಾನದಾರ (42) ಮೃತ ವ್ಯಕ್ತಿ. ಈತ ಬುದ್ಧಿಮಾಂದ್ಯನಾಗಿದ್ದು, ಓಣಿಯಲ್ಲಿ ಅಲೆದಾಡುತ್ತಿದ್ದ. ಸಂಜೆ ರಸ್ತೆ ಬಳಿ ನಿಂತಿದ್ದ ವೇಳೆ ಕೆಲ ಯುವಕರು ಕಲ್ಲು ಎಸೆದಿದ್ದಾರೆ. ತಲೆಗೆ ತೀವ್ರ ಗಾಯಗೊಂಡ ಇಲಯಾಸ್‌ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವವಾಗಿದ್ದರಿಂದ ಇಲಯಾಸ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಎಸಿಪಿ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ ಉಪನಗರ ಠಾಣೆ ಇನ್‌ಸ್ಪೆಕ್ಟರ್ ದಯಾನಂದ ಶೇಗುಣಿಸಿ ಹಾಗೂ ತಂಡ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದೆ.