

ಮೈಸೂರು: ಅತ್ಯಂತ ಜನನಿಬಿಡ ಪ್ರದೇಶವಾದ ನಗರದದ ಹೃದಯಭಾಗದ ಕೆ.ಆರ್.ವೃತ್ತದಲ್ಲಿರುವ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ಮೇಲೆ ಹತ್ತಿ ಕುಳಿತು ಮಾನಸಿಕ ಅಸ್ವಸ್ಥನಂತೆ ಕಂಡ ವ್ಯಕ್ತಿ ಕೆಲಕಾಲ ಆತಂಕ ಸೃಷ್ಟಿಸಿದ್ದ.
ಪ್ರತಿಮೆ ಸುತ್ತಲೂ ಹಾಕಿರುವ ಕಬ್ಬಿಣದ ತಡೆಗೋಡೆ ದಾಟಿ ಒಳ ಹೋಗಿದ್ದ ವ್ಯಕ್ತಿ, ಪ್ರತಿಮೆಯನ್ನು ಹತ್ತಿ ಭುಜದ ಮೇಲೆ ಕುಳಿತಿದ್ದ. ಇದನ್ನು ಕಂಡು ಕೆಲವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಆತನನ್ನು ಪ್ರತಿಮೆಯಿಂದ ಇಳಿಯುವಂತೆ ಬೆದರಿಸಿದರು.
ಪ್ರತಿಮೆಯ ಭುಜದಿಂದ ಇಳಿದ ಮಾನಸಿನ ಅಸ್ವಸ್ಥ, ಕೆಳಗೆ ಇಟ್ಟಿದ್ದ ಬೀಡಿ, ಬೆಂಕಿ ಪೊಟ್ಟಣವನ್ನು ಎತ್ತಿಕೊಂಡು ಮತ್ತೆ ಪ್ರತಿಮೆ ಏರಿ, ಪ್ರತಿಮೆಯ ಬಾಯಿಗೆ ಇಟ್ಟಿದ್ದ. ಇದರಿಂದ ಕೆರಳಿದ ಸಾರ್ವಜನಿಕರು, ಆತನನ್ನು ಗದರಿಸಿದರು. ಆದರೂ ತನ್ನ ಪಾಡಿಗೆ ಬಿಡಿಯನ್ನು ಪ್ರತಿಮೆ ಬಾಯಿಗೆ ಇಡುತ್ತಲೇ ಇದ್ದ. ಬಳಿಕ ಜನರ ಕೂಗಾಟ ಹೆಚ್ಚಾದಾಗ ಆತನ ಅಲ್ಲಿಂದ ಕಾಲ್ಕಿತ್ತ.
ನಾಲ್ವಡಿ ಅವರ ಪ್ರತಿಮೆ ಮೇಲೆ ವ್ಯಕ್ತಿ ಕುಳಿತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ತಕ್ಷಣ ಪೊಲೀಸರು ಬರಲಿಲ್ಲ ಎಂದು ಸಾರ್ವಜನಿಕರು ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ನಗರದ ಹೆಗ್ಗುರುತಾದ ಕೆ.ಆರ್.ವೃತ್ತದಲ್ಲಿರುವ ಪ್ರತಿಮೆಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ಕೆಲವೇ ದಿನಗಳಲ್ಲಿ ನಾಲ್ವಡಿ ಅವರ ಜನ್ಮ ದಿನ ಇದೆ. ಇಂತಹ ಸಮಯದಲ್ಲಿ ಪ್ರತಿಮೆಯ ಮೇಲೆ ಹತ್ತಿ ಕುಳಿತು ನಾಲ್ವಡಿ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಮೆಗೆ ಸೂಕ್ತ ರಕ್ಷಣೆ ನೀಡುವ ಜೊತೆಗೆ ಹುಚ್ಚಾಟ ನಡೆಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.