ಕ್ರೀಡೆಗಳಿಂದ ಯುವಕರಿಗೆ ಮಾನಸಿಕ ಸ್ಥಿರತೆ

25bhr 1
Published on

ಬಾಳೆಹೊನ್ನೂರು: ಕ್ರೀಡೆಗಳಲ್ಲಿ ಯುವಕರು ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಸ್ಥಿರತೆ ದೊರೆಯಲಿದೆ ಎಂದು ಪಿಎಸ್‌ಐ ರವೀಶ್ ಹೇಳಿದರು.

ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಆಯೋಜಿಸಿದ್ದ ಜೇಸಿ ಪ್ರೀಮಿಯರ್ ಲೀಗ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳು ಯುವಕರಲ್ಲಿ ಚೈತನ್ಯ ತರಲಿದ್ದು, ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಸದೃಢತೆ ಜತೆಗೆ ಉತ್ತಮ ಆರೋಗ್ಯ ಲಭ್ಯವಾಗಲಿದೆ. ಇಂದು ಕ್ರೀಡೆಯಲ್ಲಿ ಹೆಚ್ಚಿನ ಅವಕಾಶ ಇರುವುದರಿಂದ ಯುವಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜೇಸಿ ಅಲ್ಯುಮಿನಿ ಕ್ಲಬ್‌ನ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಪ್ರಾಚೀನ ಕಾಲದಲ್ಲಿ ವಿವಿಧ ಕ್ರೀಡೆಗಳನ್ನು ಹವ್ಯಾಸಕ್ಕಾಗಿ ಆಡಲಾಗುತ್ತಿತ್ತು. ಆದರೆ ಮುಂದುವರಿದ ಈ ದಿನಗಳಲ್ಲಿ ಸ್ಪರ್ಧೆ, ವೃತ್ತಿಪರವಾಗಿ ಕ್ರೀಡೆಗಳು ನಡೆಯುತ್ತಿವೆ. ಯುವಜನರಿಗೆ ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಯಶಸ್ವಿಯಾಗಲು ಸಾಧ್ಯ ಎಂದರು.

ಜೇಸಿಐ ಅಧ್ಯಕ್ಷ ಎನ್.ಶಶಿಧರ್ ಮಾತನಾಡಿ, ಬಾಳೆಹೊನ್ನೂರಿನ ಜೇಸಿ ಸಂಸ್ಥೆಯಿಂದ ನಾಲ್ಕವೇ ಬಾರಿಗೆ ಸಂಸ್ಥೆಯ ಸದಸ್ಯರಿಗಾಗಿ ಪ್ರೀಮಿಯರ್ ಲೀಗ್ ಆಯೋಜನೆ ಮಾಡಿದ್ದು, ಐಪಿಎಲ್ ಮಾದರಿಯಲ್ಲಿ ತಂಡಗಳನ್ನು ಆಯ್ಕೆಗೊಳಿಸಲಾಗಿದೆ. ಸಂಸ್ಥೆಯ ಐದು ತಂಡಗಳ ಆಟಗಾರರು ಪರಸ್ಪರ ಸ್ನೇಹ, ವಿಶ್ವಾಸದಿಂದ ಒಂದು ದಿನ ಸಂಪೂರ್ಣ ಕ್ರೀಡೆಯಲ್ಲಿ ತೊಡಗುವ ಮೂಲಕ ಸಂಸ್ಥೆ ಹಾಗೂ ಕ್ರೀಡೆಯ ಮೇಲಿನ ಬದ್ಧತೆ ಪ್ರದರ್ಶಿಸುತ್ತಿದ್ದಾರೆ ಎಂದರು.

ಉದ್ಯಮಿ ಶುಹೈಬ್, ಕ್ರಿಕೆಟ್ ಆಟಗಾರ ಸಹದೇವ, ಜೇಸಿಐ ಪೂರ್ವಾಧ್ಯಕ್ಷ ಭಾಸ್ಕರ್ ವೆನಿಲ್ಲಾ, ಬಿ.ಎಸ್.ಅಜಿತ್, ಕಾರ್ಯದರ್ಶಿ ಎಚ್.ಟಿ.ಶೃಜಿತ್, ಇಬ್ರಾಹಿಂ ಶಾಫಿ, ತೀರ್ಪುಗಾರರಾದ ಓ.ಡಿ.ಸ್ಟೀಫನ್, ಜಗದೀಶ್ ಅರಳೀಕೊಪ್ಪ, ಶೇಖರ್ ಇಟ್ಟಿಗೆ, ತಂಡದ ಮಾಲೀಕರಾದ ಡಾ.ನವೀನ್ ಲಾಯ್ಡ ಮಿಸ್ಕಿತ್, ಸುಧಾಕರ್, ಸತೀಶ್ ಅರಳೀಕೊಪ್ಪ, ಬಿ.ಸಿ.ಸಂತೋಷ ಕುಮಾರ್, ಸವಿನ್ ಹುಯಿಗೆರೆ, ರಚನ್ ಹುಯಿಗೆರೆ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net