

ರಾಯಚೂರು: ಇಂದಿನ ಒತ್ತಡದ ಜೀವನದಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕ ಆರೋಗ್ಯದ ಜತೆಗೆ ನೆಮ್ಮದಿಯೂ ದೊರೆಯುತ್ತದೆ ಎಂದು ಅಂತಾರಾಷ್ಟ್ರೀಯ ಖೋಖೋ ಕ್ರೀಡಾಪಟು ಗೌರಿಶ್ರೀ ತಿಳಿಸಿದರು.
ಸ್ಥಳೀಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳಲ್ಲಿ ಸೋಲು, ಗೆಲುವು ಸಾಮಾನ್ಯವಾಗಿರುತ್ತದೆ. ಆದರೆ ಭಾಗವಹಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂದರು.
ಸದಾ ಒತ್ತಡದ ಮಧ್ಯೆ ಕೆಲಸ ಮಾಡುತ್ತಿರುವ ಪೊಲೀಸರಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಎಲ್ಲರಲ್ಲೂ ಒಂದೊಂದು ಕ್ರೀಡಾ ಪ್ರತಿಭೆ ಇರುತ್ತಿದ್ದು, ಅದನ್ನು ಗುರುತಿಸಿ ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್ ಮಾತನಾಡಿ, ವಾರ್ಷಿಕ ಕ್ರೀಡಾಕೂಟ ಕೇವಲ ಪೊಲೀಸರ ದೈಹಿಕ ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಪೊಲೀಸರ ಕುಟುಂಬಗಲು ಸೇರುವ ಪ್ರೀತಿ, ವಿಶ್ವಾಸದ ಪ್ರತಿಬಿಂಬವಾಗಿರುತ್ತದೆ. ಪ್ರತಿವರ್ಷ ನಡೆಯುವ ಕ್ರೀಡಾಕೂಟದಲ್ಲಿ ಎಲ್ಲರ ನಡುವಿನ ಅನುಬಂಧ ಹೆಚ್ಚಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ, ಡಿವೈಎಸ್ಪಿಗಳಾದ ಸತ್ಯನಾರಾಯಣ, ದತ್ತಾತ್ರೇಯ ಕರ್ನಾಡ್, ಡಿಆರ್ ಡಿವೈಎಸ್ಪಿ ಪರಮಾನಂದ ಗೋಡ್ಕೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.