

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ. ವಿದ್ಯಾರ್ಥಿಗಳು, ಯುವಕರಲ್ಲಿ ಮಾನಸಿಕ ಖಿನ್ನತೆ ಸಮಸ್ಯೆಗಳು, ನಿದ್ರಾಹೀನತೆ ಸಮಸ್ಯೆಗಳು, ಹಸಿವಿನ ತೊಂದರೆಗಳು ಸಾಮಾನ್ಯವಾಗಿವೆ ಎಂದು ಡಿಮ್ಹಾನ್ಸ್ ಸಹಾಯಕ ಪ್ರಾಧ್ಯಾಪಕ ಡಾ. ತೇಜಸ್ವಿ ಟಿ.ಪಿ. ಹೇಳಿದರು.
ನಗರದ ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ 2023-24ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ವಿಭಾಗಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ, ಯೋಗಗಳಂತಹ ಚಟುವಟಿಕೆಗಳನ್ನು ನಿತ್ಯ ರೂಢಿಸಿಕೊಂಡರೆ ಮಾನಸಿಕ ಸಮಸ್ಯೆಗಳಿಂದ ಮತ್ತು ಒತ್ತಡಗಳಿಂದ ಮುಕ್ತರಾಗಿ ಒಳ್ಳೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತಪ್ರಸಾದ ಮಾತನಾಡಿ, ಸಂಸ್ಥೆ ಆರಂಭವಾದ ದಿನದಿಂದ ಅನೇಕ ಸಮಸ್ಯೆಗಳ ಮಧ್ಯೆಯೂ ಎದೆಗುಂದದೆ ಮುನ್ನಡೆಸಿದ್ದಾರೆ. ಅದರ ಪರಿಣಾಮ ಕೆಜಿಯಿಂದ ಪಿಎಚ್‌ಡಿವರೆಗೂ ಸಂಸ್ಥೆಯು ಶಿಕ್ಷಣ ಸೇವೆ ಸಲ್ಲಿಸುತ್ತಿದೆ ಎಂದರು.
ಜೆಎಸ್‌ಎಸ್ ಕಾಲೇಜಿನ ಅಭಿವೃದ್ಧಿ ಅಧಿಕಾರಿ ಡಾ. ಸೂರಜ್ ಜೈನ್ ಪ್ರತಿಜ್ಞಾವಿಧಿ ಬೋಧಿಸಿದರು. ಉಪಪ್ರಾಚಾರ್ಯೆ ಆವಂತಿಕಾ ರೊಟ್ಟಿ, ಡಾ. ಎನ್.ಡಿ. ಕುಲಕರ್ಣಿ, ಕ್ರೀಡಾ ವಿಭಾಗದ ಮುಖ್ಯಸ್ಥ ಜಿನ್ನಪ್ಪ ಕುಂದಗೋಳ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿನದತ್ತ ಹಡಗಲಿ, ವಿದ್ಯಾರ್ಥಿ ಪ್ರತಿನಿಧಿಗಳು, ಇತರರು ಇದ್ದರು.
ಅಪೂರ್ವ ಐಹೊಳೆ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಕೆ.ಎಚ್. ನಾಗಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಾ ಹಂಜಿ ಮತ್ತು ಅರವಿಂದ ಮಳಲಿ ನಿರೂಪಿಸಿದರು. ವಸಂತ ಮೈಲೇಶ್ವರ ವಂದಿಸಿದರು.