

ಅರಸೀಕೆರೆ ಗ್ರಾಮಾಂತರ: ಮನುಜ ಆಧ್ಯಾತ್ಮಿಕ ಚಿಂತನೆಯಿದ್ದಲ್ಲಿ ಮನಸ್ಸಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಧಾರ್ಮಿಕ ಆಚರಣೆಗಳು ದೇಶದಲ್ಲಿ ತಲೆತಲಾಂತರಗಳಿಂದ ನಡೆದು ಬರುತ್ತಿದ್ದು, ಇವು ನಾಡಿನ ಐಕ್ಯತೆಗೆ ಪೂರಕವಾಗಲಿವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟರು.
ಅವರ ಮನೆ ದೇವರಾದ ಅರಸೀಕೆರೆ ಮಾಲ್ಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯದ ಹಳೆಯ ಗರುಡಗಂಭವನ್ನು ಭಾನುವಾರ ದರ್ಶನ ಮಾಡಿ ನಂತರ ಗೋವಿಂದ ರಾಜಸ್ವಾಮಿ-ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಅರ್ಚನೆ, ಪೂಜೆ ಸಲ್ಲಿಸಿ ಮಾತನಾಡಿ, ಧಾರ್ಮಿಕ ಚಿಂತನೆಗಳ ಮೂಲಕ ಊರು ಅಭಿವೃದ್ಧಿ ಹೊಂದುತ್ತದೆ. ಅದಕ್ಕೆ ಪೂರಕವಾದ ವಾತಾವರಣ ದೇವಾಲಯಗಳಲ್ಲಿ ಇರುತ್ತದೆ ಎಂದು ತಿಳಿಸಿದರು.
ಶಿಥಿಲವಾಗಿದ್ದ ಗರುಡಗಂಭವನ್ನು ಅಶೋಕ್ ಹಾರನಹಳ್ಳಿ ಅವರ ಕುಟುಂಬದವರು ನಿರ್ಮಿಸಿ ದೇವರ ಸೇವಾ ಕಾರ್ಯ ಮಾಡಿದ್ದರು. ಜುಲೈ ತಿಂಗಳಲ್ಲಿ ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ವಿಶೇಷ ಪೂಜೆ ನಡೆದು ಉದ್ಘಾಟನೆಯಾಗಿತ್ತು. ದೇವಾಲಯದ ನಿಕಟಪೂರ್ವ ಸಂಚಾಲಕ ಟಿ.ಆರ್.ನಾಗರಾಜ್, ಪಾರುಪತ್ತೇಗಾರ ಲೋಕೇಶ್, ಚಂದ್ರಶೇಖರ್, ವಿದ್ಯಾಸಂಸ್ಥೆ ನೌಕರರು, ಗ್ರಾಮಸ್ಥರು ಇದ್ದರು.