

ಗಂಡಸಿ : ಮೊಬೈಲ್ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವುದಲ್ಲದೇ ಮಾನಸಿಕ ಕಾಯಿಲೆ ಉಲ್ಬಣಿಸಲು ಕಾರಣವಾಗಿದೆ ಎಂದು ಕೆಂಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಾನಸಾ ತಿಳಿಸಿದರು.
ಹೋಬಳಿಯ ಚಿಂದೆನಹಳ್ಳಿ ಗೇಟ್ ಕೆಪಿಎಸ್ ಶಾಲೆಯಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರೀಕ್ಷೆ ಆತಂಕ ನಿವಾರಣೆ ಕಾರ್ಯಾಗಾರ ಮತ್ತು ಕುಷ್ಟರೋಗ ನಿರ್ಮೂಲನಾ ಜಾಥಾ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪುಸ್ತಕ ಹೇಳುತ್ತದೆ ಪ್ರತಿದಿನ ನನ್ನನ್ನು ಶ್ರದ್ಧೆಯಿಂದ ತಲೆ ತಗ್ಗಿಸಿ ನೋಡು ಜೀವನದಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡುತ್ತೇನೆ. ಮೊಬೈಲ್ ಹೇಳುತ್ತದೆ ಪ್ರತಿದಿನ ನನ್ನನ್ನು ವೀಕ್ಷಿಸು ಜೀವನದಲ್ಲಿ ತಲೆ ಎತ್ತದಂತೆ ಮಾಡುತ್ತೇನೆ ಎಂದು. ಈ ಎರಡು ವಿಷಯದಲ್ಲಿ ಆಯ್ಕೆ ನಿಮ್ಮದು. ಜೀವನದಲ್ಲಿ ವಿದ್ಯಾರ್ಥಿಗಳು ಕಲೆ, ಕೌಶಲ, ತಾಳ್ಮೆ ಕಳೆದುಕೊಳ್ಳಬಾರದು ಎಂದ ಅವರು, ಪರೀಕ್ಷೆಗಳು ಹತ್ತಿರವಾಗುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಭಯ, ಆತಂಕ ಮೂಡುವುದು ಸಹಜ. ಏಕಾಗ್ರತೆಯಿಂದ ಕುಳಿತು ವೇಳಾಪಟ್ಟಿ ರಚಿಸಿಕೊಂಡು ವಿಷಯವಾರು ಅಧ್ಯಯನ ಮಾಡಿದರೆ ಸಾಧನೆ ಕಟ್ಟಿಟ್ಟ ಬುತ್ತಿ ಎಂದರು.
ಪರೀಕ್ಷೆ ಸಂದರ್ಭದಲ್ಲಿ ಒಂದು ವಿಷಯವನ್ನು 30 ನಿಮಿಷ ಅಧ್ಯಯನ ಮಾಡಿ ನಂತರ ವಿರಾಮ ತೆಗೆದುಕೊಳ್ಳಿ, ಬೇರೆ ಬೇರೆ ವಿಷಯಗಳ ಬಗ್ಗೆ ಗಮನಹರಿಸಬೇಡಿ. ಮನಸ್ಸು ವಿಚಲಿತವಾಗುತ್ತದೆ ಸಾಕಷ್ಟು ಸಮಯ ನಿದ್ದೆ ಮಾಡಿ, ಪೌಷ್ಟಿಕ ಆಹಾರ ಸೇವಿಸಿ ತಾವು ಆರೋಗ್ಯವಂತರಾಗಿದ್ದರೆ ಮನಸ್ಸು ಕೂಡ ಅಧ್ಯಯನದ ಬಗ್ಗೆ ಸಕ್ರಿಯವಾಗುತ್ತದೆ. ತಮ್ಮ ಏಕಾಗ್ರತೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ ನಾಯಕ್, ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕ ಚಂದ್ರೇಗೌಡ, ಆರೋಗ್ಯ ಇಲಾಖೆಯ ರಮ್ಯ, ಶ್ವೇತಾ, ಮಮತಾ, ಆಶಾ ಮತ್ತು ಆಶಾ ಕಾರ್ಯಕರ್ತೆಯರಾದ ಸುಮಂಗಳಾ, ಲತಾ ಶಿಕ್ಷಕರುಗಳಾದ ಗೀತಾ, ದೀಪಾ, ಶೈಲಾ, ಆಶಾ, ಸುಮಿತ್ರಾ, ರಾಜೇಶ್ವರಿ, ಬಸಂತ್, ರವೀಶ್, ಶಿವಣ್ಣ ಹಾಜರಿದ್ದರು.