ವಿಚ್ಛೇದನದಿಂದ ಮಾನಸಿಕ ಅಸ್ವಸ್ಥೆಯಾದ ಮಹಿಳೆ ರಕ್ಷಣೆ

udp-14-deepa kamath
Published on

ಉಡುಪಿ: ಗಂಡನಿಂದ ವಿಚ್ಛೇದನ ಪಡೆದ ಬಳಿಕ ಮಾನಸಿಕ ಅಸ್ವಸ್ಥೆತೆಗೆ ಜಾರಿದ ಮಹಿಳೆಯೊಬ್ಬರನ್ನು ರಥಬೀದಿಯಲ್ಲಿ ರಕ್ಷಣೆ ಮಾಡಲಾಗಿದೆ.

ಸಾಗರ ಮೂಲದ ದೀಪಾ ಕಾಮತ್ (38) ರಕ್ಷಿಸಲ್ಪಟ್ಟ ಮಹಿಳೆ. ಮಹಿಳೆಯ ಮಾನಸಿಕ ಅಸ್ವಸ್ಥತೆ ಹೆಚ್ಚಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನರ ಜೊತೆಗೆ ಜಗಳ ಮಾಡುತ್ತಿದ್ದಳು. ನನ್ನ ಗಂಡ ಉಡುಪಿಯಲ್ಲಿದ್ದಾನೆ. ಅವನನ್ನು ಹುಡುಕಿಕೊಂಡು ಬಂದಿದ್ದೇನೆ. ನನಗೊಂದು ಕೆಲಸಕೊಡಿ ಎಂದು ತಿರುಗಾಡುತ್ತಿದ್ದ ಈಕೆ, ಸರಿಯಾಗಿ ಸ್ನಾನ ಮಾಡದೆ ಸ್ವಚ್ಛತೆಗೆ ಗಮನ ಕೊಡದಿರುವುದರಿಂದ ತಲೆಕೂದಲು ಜಡೆಗಟ್ಟಿದೆ. ಮೈಯೆಲ್ಲಾ ದುರ್ನಾತ ಬೀರುತ್ತಿತ್ತು.

ರಕ್ಷಣೆಗೆ ವಿರೋಧ
ಮಹಿಳೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರು, ಮಹಿಳಾ ಠಾಣೆಯ ಎಚ್‌ಸಿ ಜ್ಯೋತಿ ನಾಯಕ್ ಹಾಗೂ ಸಖಿ ಸೆಂಟರ್ ಸಿಬ್ಬಂದಿ ನೀತಾ ಹಾಗೂ ಪ್ರಮೀಳಾ ಅವರ ಜೊತೆಗೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಮಹಿಳೆ ಸಾಕಷ್ಟು ಪ್ರತಿರೋಧ ತೋರಿದ್ದಾಳೆ. ಕೊನೆಗೂ ಆಕೆಯ ಮನವೊಲಿಸಿ ಠಾಣೆಗೆ ಕರೆದುಕೊಂಡು ಬರಲಾಯಿತು. ಈ ಮಧ್ಯೆ ಉಡುಪಿಯಲ್ಲಿರುವ ಮಹಿಳೆಯ ಸಂಬಂಧಿಕರನ್ನು ಸಂಪರ್ಕಿಸಿದರೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಮಹಿಳೆಯ ಪುನರ್ವಸತಿಯ ದೃಷ್ಟಿಯಿಂದ ವಿಶು ಶೆಟ್ಟಿ ಅವರು ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮದ ಮುಖ್ಯಸ್ಥ ಉದಯ ಕುಮಾರ್ ಅವರಿಗೆ ಮನವಿ ಮಾಡಿ ಆಶ್ರಮಕ್ಕೆ ದಾಖಲಿಸಲಾಯಿತು.

ಈ ಹಿಂದೆಯೂ 2 ಬಾರಿ ಇದೇ ರೀತಿ ಬೀದಿ ಪಾಲಾಗಿದ್ದ ಮಹಿಳೆಯನ್ನು ವಿಶು ಶೆಟ್ಟಿ ಅವರು ಉಡುಪಿ ಪೊಲೀಸರ ಸಹಾಯದಿಂದ ರಕ್ಷಿಸಿ, ಆಕೆಯ ತಂದೆಯ ವಶಕ್ಕೆ ಒಪ್ಪಿಸಿದ್ದರು. ಮಹಿಳೆ ಸುಶಿಕ್ಷಿತೆಯಾಗಿದ್ದು, ಎರಡನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವಾಗ ಮದುವೆ ಮಾಡಿಕೊಡಲಾಗಿತ್ತು ಎಂಬ ಮಾಹಿತಿಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net