ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ : ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್

mysore university
Published on

ಮೈಸೂರು: ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾಗಿದ್ದು , ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಹೇಳಿದರು.

ಮಾನಸಗಂಗೋತ್ರಿ ಸಮಾಜ ಕಾರ್ಯ ಅಧ್ಯಯನ ವಿಭಾಗ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಕಚೇರಿ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಕ್ರಾಫರ್ಡ್ ಹಾಲ್‌ನಲ್ಲಿ ಬುಧವಾರ ಒತ್ತಡ ನಿರ್ವಹಣೆ ಕುರಿತು ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆ 1992ರಿಂದ ಮಾನಸಿಕ ಆರೋಗ್ಯ ದಿನಾಚರಣೆ ಆಚರಿಸುತ್ತಿದೆ. ಈ ವರ್ಷ ಎಲ್ಲರ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮ ಜಾಗತಿಕ ಆದ್ಯತೆ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಕೋವಿಡ್ ನಂತರ ಮಾನಸಿಕ ಕ್ಷೋಬೆ ಹೆಚ್ಚುತ್ತಿದೆ. ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಲು ದೈಹಿಕ ಹಾಗೂ ಮಾನಸಿಕ ಆರೋಗ್ಯ ತುಂಬಾ ಮುಖ್ಯ ಎಂದು ಹೇಳಿದರು.

ಮನುಷ್ಯ ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಲು ಆರೋಗ್ಯ ಅತ್ಯಗತ್ಯ, ಅದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಒಳಗೊಂಡಿರುತ್ತದೆ. ಮಾನಸಿಕ ಆರೋಗ್ಯ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಮಾನಸಿಕ ಆರೋಗ್ಯ ದಿನದ ಉದ್ದೇಶವಾಗಿದೆ. ಈ ದಿನದಂದು ಮಾನಸಿಕ ಅಸಹಜತೆ, ಅವುಗಳನ್ನು ತಡೆಗಟ್ಟುವಿಕೆಯ ಸಂಶೋಧನೆಗಳು ಹಾಗೂ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿ ಸೂಕ್ತದ ಸಲಹೆಗಳನ್ನು ನೀಡುವ ಮುಖಾಂತರ ಸ್ವಸ್ಥ ಮಾನಸಿಕ ಆರೋಗ್ಯವನ್ನು ಕಾಪಾಡಬಹುದಾಗಿದೆ ಎಂದು ಹೇಳಿದರು.

ಖಿನ್ನತೆಯು ಎಲ್ಲ ವಯೋಮಾನದ, ಸಮುದಾಯದ ಸುಮಾರು 350 ಮಿಲಿಯನ್ ಜನರನ್ನು ಬಾಧಿಸುತ್ತಿವೆ. ಖಿನ್ನತೆಗೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯ ಇವೆ. ಆದರೆ ಕೆಲವು ದೇಶಗಳಲ್ಲಿ ಈ ಚಿಕಿತ್ಸೆಯ ಅಳವಡಿಕೆಯೇ ಕಷ್ಟವಾದದ್ದು. ಇನ್ನು ಕೆಲವು ದೇಶಗಳಲ್ಲಿ ಶೇ.10 ಕ್ಕಿಂತಲೂ ಕಡಿಮೆ ಜನರಿಗೆ ಮಾತ್ರ ಲಭ್ಯವಾಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್ ಭೂತೆ ಮಾತನಾಡಿ, ದೈಹಿಕ ಅನಾರೋಗ್ಯಕ್ಕೆ ನೀಡುವ ಆದ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು. ಸ್ಪರ್ಧಾತ್ಮಕತೆಯಿಂದ ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಯೋಗ, ಧ್ಯಾನ, ಶಿಸ್ತುಬದ್ಧ ಜೀವನದಿಂದ ಮಾನಸಿಕ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬಹುದು. ಎಲ್ಲ ಕ್ಷೇತ್ರಗಳಲ್ಲೂ ಒತ್ತಡ ಇರುತ್ತದೆ. ಆದರೆ, ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಮಾತನಾಡಿ, 20 ಕೋಟಿ ಜನರು ವಿವಿಧ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಖಿನ್ನತೆ, ಆವೇಶ, ಒತ್ತಡ ಮಾನಸಿಕ ಆರೋಗ್ಯದ ವಿಧಗಳು. ಅನುವಂಶಿಕವಾಗಿಯೂ ಇದು ಬರುತ್ತದೆ. ಚಿಕಿತ್ಸೆ ನೀಡಿದರೆ ಇದು ಗುಣಮುಖವಾಗುತ್ತದೆ. ಮಾನಸಿಕ ಕಾಯಿಲೆಯಿಂದ ದೂರ ಇರಬೇಕು. ಕೌನ್ಸೆಲಿಂಗ್, ಚಿಕಿತ್ಸೆ ನೀಡುವ ಮೂಲಕ ಮಾನಸಿಕ ಆರೋಗ್ಯವನ್ನು ಗುಣಮುಖ ಮಾಡಬಹುದು ಎಂದು ತಿಳಿಸಿದರು.

ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ವೆಂಕಟೇಶ್ ಮಾತನಾಡಿ, ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯಲ್ಲಿ ಒತ್ತಡದಲ್ಲಿಯೇ ಜೀವನ ನಡೆಸುತ್ತಿರುತ್ತಾರೆ. ಸಾಕಷ್ಟು ಜನರಿಗೆ ದೈಹಿಕ ಆರೋಗ್ಯ ಉತ್ತಮವಾಗಿದ್ದರೂ ಮಾನಸಿಕ ಆರೋಗ್ಯ ಉತ್ತಮವಾಗಿರುವುದಿಲ್ಲ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಒತ್ತಡ ನಿರ್ವಹಣೆ ಶಕ್ತಿ ಹೆಚ್ಚಾಗಿರುತ್ತದೆ. ಅವರು ತಮ್ಮ ಭಾವನೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡು ಹಗುರವಾಗುತ್ತಾರೆ. ಹೀಗಾಗಿ ಒತ್ತಡದಿಂದ ಹೊರ ಬರಲು ಎಲ್ಲರು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಸಮಾಜ ಕಾರ್ಯ ವಿಭಾಗದ ಅಧ್ಯಕ್ಷೆ ಡಾ.ಜ್ಯೋತಿ, ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಮಂಜುಪ್ರಸಾದ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net