ಮೈಸೂರಿನಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ

Mental Health Day in Mysore
Published on

ಮೈಸೂರು: ಸಾಕಷ್ಟು ಜನರು ದೈಹಿಕ ಅರೋಗ್ಯಕ್ಕೆ ನೀಡುವಷ್ಟು ಮಹತ್ವವನ್ನು ಮಾನಸಿಕ ಆರೋಗ್ಯಕ್ಕೆ ನೀಡುತ್ತಿಲ್ಲ. ಮಾನಸಿಕ ಆರೋಗ್ಯವನ್ನು ಕಡೆಗಣಿಸಿದರೆ ದೈಹಿಕ ಆರೋಗ್ಯವೂ ಹದಗೆಡುತ್ತದೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ವತಿಯಿಂದ ನಜರ್‌ಬಾದ್‌ನ ವೈದ್ಯರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನಸಿಕ ಕಾಯಿಲೆಗಳು ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಅರಿವಿನ ಕೊರತೆಯಿಂದ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಸಾಕಷ್ಟು ಜನರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾನಸಿಕ ಕಾಯಿಲೆಗೆ ಚಿಕಿತ್ಸೆ ಇದ್ದು, ಪ್ರತಿಯೊಬ್ಬರು ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಕಷ್ಟು ಕೌಟುಂಬಿಕ ಸಮಸ್ಯೆಗಳು ಮಾನಸಿಕ ಕಾಯಿಲೆಗಳಿಂದ ಕಾಣಿಸಿಕೊಳ್ಳುತ್ತದೆ. ವಿವಾಹ ಸಂದರ್ಭ ಸಾಕಷ್ಟು ಜನರು ಮಾನಸಿಕ ಕಾಯಿಲೆ ಮುಚ್ಚಿಡುತ್ತಾರೆ. ನಂತರ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರುತ್ತದೆ. ಎಲ್ಲರೂ ಒಂದಲ್ಲ ಒಂದು ಬಾರಿ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಮಾನಸಿಕ ಅನಾರೋಗ್ಯ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಮೊಬೈಲ್ ಚಟ ಕೂಡ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗಬಹುದು. ಸಾಕಷ್ಟು ಜನರು ಆನ್‌ಲೈನ್ ಜೂಜಾಟದಲ್ಲಿ ತೊಡಗಿ ಹಣ ಕಳೆದುಕೊಂಡು ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿದ್ದರೂ ಒತ್ತಡ ಎದುರಿಸುವ ಕಲೆ ಬೆಳೆಸಿಕೊಳ್ಳಬೇಕು. ಮಕ್ಕಳು ಸಹ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರು ಒತ್ತಡದಲ್ಲಿಯೇ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ ಮಾತನಾಡಿ, ಮನಸ್ಸಿಗೆ ನೋವಾದ ಸಂದರ್ಭದಲ್ಲಿ ಅದರಿಂದ ನಾವು ರೀತಿ ಹೊರಗೆ ಬರಬೇಕು ಎಂಬುದನ್ನು ತಿಳಿದುಕೊಳ್ಳಲು ವೈದ್ಯರ ನೆರವು ಪಡೆಯಬೇಕು. ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.

ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಬೃಂದಾ, ಡಾ.ಮಾಲಿನಿ, ಸಂಸ್ಥೆಯ ಸಹಾಯಕ ನಿರ್ದೇಶಕ ಜಯಪ್ರಕಾಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net