ಕ್ರೀಡಾಕೂಟದಿಂದ ಮಾನಸಿಕ, ದೈಹಿಕ ಸದೃಢ

h27-tippu
Published on

ಹುಬ್ಬಳ್ಳಿ: ನಗರದ ಟಿಪ್ಪು ಷಹೀದ್ ಪಾಲಿಟೆಕ್ನಿಕ್​ನಲ್ಲಿ ಕಾಲೇಜ್ ವಾರ್ಷಿಕೋತ್ಸವ ಸಮಾರಂಭವನ್ನು ಶನಿವಾರ ಏರ್ಪಡಿಸಲಾಗಿತ್ತು.

ಕರ್ನಾಟಕ ಕಾಲೇಜ್ ಧಾರವಾಡದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ವೆಂಕಪ್ಪ ಕಲಾದಗಿ ಮಾತನಾಡಿ, ಆರೋಗ್ಯಯುತ ದೇಹದಲ್ಲಿ ಸದೃಢವಾದ ಮನಸ್ಸು ನಿರ್ವಿುಸಲು ಸಾಧ್ಯ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕ್ರೀಡಾಕೂಟದಿಂದ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕ ಸದೃಢತೆ ಪಡೆಯಲು ಸಾಧ್ಯ ಎಂದರು.

ಸನ್ಮಾನ ಸ್ವೀಕರಿಸಿದ ಪ್ರಾಚಾರ್ಯ ಎಂ.ಎಸ್. ಮುಲ್ಲಾ ಮಾತನಾಡಿ, ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಯಶಸ್ಸಿಗೆ ಶಾರ್ಟ್ ಕಟ್​ಗಳಿಲ್ಲ. ನೀವು ಅತ್ಯಂತ ಪ್ರತಿಭಾವಂತ ವ್ಯಕ್ತಿಯಲ್ಲದಿದ್ದರೂ ನಿಮಗೆ ಯೋಗ್ಯವಾದ ಜೀವನವನ್ನು ನೀಡಲು ಕಠಿಣ ಪರಿಶ್ರಮವು ನಿಮ್ಮ ಕೈ ಹಿಡಿದಿರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಬಹಳ ಮಹತ್ವವಾದದು. ಇಲ್ಲಿ ಯಾವುದೇ ವ್ಯಕ್ತಿ ಜೀವನವಿಡೀ ಒಂದೇ ವೃತ್ತಿಗೆ ನೆಚ್ಚಿಕೊಂಡು ಕೂರುವುದಿಲ್ಲ, ಬದಲಾವಣೆ ಮಾಡುತ್ತಿರುತ್ತಾನೆ. ಇದಕ್ಕಾಗಿ ಆತನಿಗೆ ಸತತವಾಗಿ ಕೌಶಲಗಳನ್ನು ಬೆಳಸಿಕೊಳ್ಳುವ, ವೃದ್ಧಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.

ವಿವಿಧ ವಿಭಾಗಗಳ ಮುಖ್ಯಸ್ಥರಾದ ರವೀಂದ್ರ ಸಿಂಗ್ ಅತ್ತರ, ಸಿ.ಎ. ತುಪ್ಪದ, ಎಂ.ಎಸ್. ಸೋಮನಕಟ್ಟಿ, ಬಾಳೇಶ ಹೆಗ್ಗಣ್ಣವರ, ಮಸೂದ ಅಹ್ಮದ ಜುನೇದಿ, ಎಂ.ಎಚ್. ಧಾರವಾಡ, ಎ.ಎ. ಕಿತ್ತೂರ, ಕಿರಣಕುಮಾರ ಮಂಟೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net