ವೃದ್ಧೆಯರಿಗೆ ಮತ್ತೆ ಮಾಸಾಶನ

HUN-APR-21-5(BELAKU SEVA SAMSTHE)
ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ವೃದ್ಧೆಯರಿಗೆ ಬೆಳಕು ಸೇವಾ ಸಂಸ್ಥೆಯ ಮುಖ್ಯಸ್ಥ ನಿಂಗರಾಜ ಮಲ್ಲಾಡಿ ಮಾಸಾಶನ ಮಂಜೂರಾತಿ ಪತ್ರ ನೀಡಿದರು. ಜಯಮ್ಮ ಮತ್ತು ಮುನಿಯಮ್ಮ ಇದ್ದರು.
Published on

ಹುಣಸೂರು: ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ಪಡೆಯುತ್ತಿದ್ದ ಇಬ್ಬರು ವೃದ್ಧೆಯರಿಗೆ ಮಾಸಾಶನ ಇದ್ದಕ್ಕಿದ್ದಂತೆ ನಿಂತು ಹೋದ ಪರಿಣಾಮ ಭಿಕ್ಷಾಟನೆಗೆ ತೊಡಗಿದ್ದಾರೆಂಬ ಕುರಿತು ಮಾಹಿತಿ ಅರಿತ ಬೆಳಕು ಸೇವಾ ಸಂಸ್ಥೆ ವೃದ್ಧೆಯರಿಗೆ ಮತ್ತೆ ಮಾಸಾಶನ ದೊರಕಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದೆ.

ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಲಕ್ಷ್ಮಣತೀರ್ಥ ನದಿದಂಡೆಯ ಗುಡಿಸಲಿನಲ್ಲಿ ವಾಸವಿರುವ 70 ವರ್ಷದ ಜಯಮ್ಮ ಮತ್ತು ಮುನಿಯಮ್ಮ ಅವರಿಗೆ 4-5 ತಿಂಗಳಿಂದ ಸಂಧ್ಯಾ ಸುರಕ್ಷಾ ಯೋಜನೆಯಡಿ ಬರುತ್ತಿದ್ದ ಮಾಸಾಶನ ನಿಂತುಹೋಗಿತ್ತು. ತುತ್ತು ಅನ್ನಕ್ಕೂ ಪರಿದಾಡುವ ಸ್ಥಿತಿ ತಲುಪಿದ ಇವರು ಇತ್ತೀಚೆಗೆ ಅಲ್ಲಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು.

ಈ ಮಾಹಿತಿ ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಬೆಳಕು ಸೇವಾ ಸಂಸ್ಥೆ ಮುಖ್ಯಸ್ಥ ನಿಂಗರಾಜ ಮಲ್ಲಾಡಿ, ಸೋಮವಾರ ತಾಲೂಕು ಕಚೇರಿಯಲ್ಲಿ ವೃದ್ಧೆಯರ ದಾಖಲೆಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಿ ವಸ್ತುಸ್ಥಿತಿ ಮನವರಿಕೆ ಮಾಡಿದರು. ಸಮಸ್ಯೆ ಗಂಭೀರತೆ ಅರಿತ ಅಧಿಕಾರಿಗಳು ಮಾಸಾಶನ ನೀಡಲು ಕ್ರಮ ವಹಿಸಿದರು.

ಈ ವೇಳೆ ಮಾತನಾಡಿದ ನಿಂಗರಾಜ ಮಲ್ಲಾಡಿ, ಈ ಹಿಂದೆ ಈ ಇಬ್ಬರೂ ವೃದ್ಧೆಯರಿಗೆ ತಮ್ಮ ಸಂಸ್ಥೆ ಮಾಸಾಶನ ಮಾಡಿಸಿಕೊಟ್ಟಿತ್ತು. ಆದರೆ ಇದ್ದಕ್ಕಿದ್ದಂತೆ ಮಾಸಾಶನ ನಿಂತುಹೋದ ಪರಿಣಾಮ ತಾಯಂದಿರು ಬೀದಿಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ತಾಲೂಕು ಕಚೇರಿಯಲ್ಲಿ ಅಧಿಕಾರಿಗಳಿಗೆ ಮತ್ತೆ ದಾಖಲೆ ಒದಗಿಸಲಾಗಿದೆ. ನಂತರ ಬ್ಯಾಂಕ್‌ಗೆ ತೆರಳಿ ಪ್ರತಿ ತಿಂಗಳು ಈ ಇಬ್ಬರು ವೃದ್ಧೆಯರ ಖಾತೆಗೆ ಸಮರ್ಪಕವಾಗಿ ಮಾಸಾಶನ ಜಮಾ ಆಗುವಂತೆ ಕ್ರಮ ವಹಿಸಲು ಕೋರಲಾಗಿದೆ.

ಅನಾಥರಾದ ತಮಗೆ ಬೆಳಕು ಸೇವಾ ಸಂಸ್ಥೆ ಮತ್ತೆ ಕೈಹಿಡಿದು ಸಹರಿಸಿದೆ ಎಂದು ವೃದ್ಧೆಯರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net