

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದಾರೆ. ಇದಕ್ಕೆ ಆಧುನಿಕತೆಯ ಆಹಾರ ಪದ್ಧತಿ ಕಾರಣ ಎಂದು ಸ್ತ್ರೀರೋಗ ತಜ್ಞೆ ಡಾ.ಲಾವಣ್ಯ ಕಿರಣ್ ಅಭಿಪ್ರಾಯಪಟ್ಟರು.
ನಗರದ ಸಂತ ಜೋಸೆಫರ ಶಾಲೆ ಸಭಾಂಗಣದಲ್ಲಿ ರೋಟರಿ ಸಂಸ್ಥೆ ಮಂಡ್ಯ, ರೋಟರಿ ಸಂಸ್ಥೆ ನಾರ್ಥ್ ಬೆಂಗಳೂರು, ರೋಟರಿ ಸಂಸ್ಥೆ ಪ್ಲಾಟಿನಂ ಸಿಟಿ, ರೋಟರಿ ಸಂಸ್ಥೆ ರಾಜಾಜಿನಗರ, ರೋಟರಿ ಸಂಸ್ಥೆ ಕೆ.ಎಂ.ದೊಡ್ಡಿ, ಸಂತ ಜೋಸೆಫರ ಶಾಲೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಹದಿಹರೆಯದ ವಿದ್ಯಾರ್ಥಿನಿಯರಿಗೆ ಸ್ವ ಸ್ವಚ್ಛತೆ-ಋತುಚಕ್ರ ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿಕ್ಕಮಗು ಬೆಳೆಯುತ್ತಾ ಹೆಣ್ಣಾಗಲು ಋತುಚಕ್ರ ಆರಂಭವಾಗಲೇಬೇಕು. ಬಳಿಕ ಹಾರ್ಮೊನ್‌ಗಳು ಏರುಪೇರು ಆಗುತ್ತಲೇ ಇರುತ್ತವೆ. ಪ್ರತಿ ತಿಂಗಳು ಋತುಚಕ್ರ ಆಗಲೇಬೇಕಿದೆ. ಒಂದು ವೇಳೆ ಸ್ವಲ್ವ ದಿನ ಏರುಪೇರಾದರೂ ಗಾಬರಿಯಾಗಬೇಡಿ. ಸ್ವ ಸ್ವಚ್ಛತೆ ಮತ್ತು ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ. 9 ರಿಂದ 14 ವರ್ಷದವರೆಗೆ ಯಾವಾಗ ಬೇಕಾದರೂ ಋತುಚಕ್ರ ಆರಂಭವಾಗಬಹುದು. ಅದು ಸಾಮಾನ್ಯವಾದ ಕ್ರಮವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಕೀಲೆ ಆಶಾಲತಾ ಮಾತನಾಡಿ, ಇಂದಿನ ಹದಿಹರೆಯದ ಹೆಣ್ಣುಮಕ್ಕಳು ಸ್ವ ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪ್ಯಾಡ್‌ಗಳನ್ನು ಬಿಟ್ಟು ಮನೆಯಲ್ಲಿಯೇ ಸಿಗುವ ಸ್ವಚ್ಛ ಬಟ್ಟೆಯನ್ನು ಬಳಸುವುದು ಉತ್ತಮ ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೋಟರಿ ಸಂಸ್ಥೆ ಮಂಡ್ಯ ಅಧ್ಯಕ್ಷೆ ಬಿ.ಎಸ್.ಅನುಪಮಾ, ಇತ್ತೀಚಿನ ವರ್ಷದಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಕಾಯಿಲೆಗಳು ಹೆಚ್ಚಾಗುತ್ತಿವೆ. ಗರ್ಭಕೋಶ ಕ್ಯಾನ್ಸರ್ ಕೂಡ ಪ್ರಮುಖವಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಬಳಸುವ ಋತುಚಕ್ರದ ಪ್ಯಾಡ್‌ಗಳ ಪ್ಲಾಸ್ಟಿಕ್ ಕೂಡ ಕಾರಣವಾಗುತ್ತಿದೆ ಎಂದು ಹೇಳಿದರು.
ಸಂತ ಜೋಸೆಫರ ಶಾಲೆಯ ಸಿಸ್ಟರ್ ಫೆಡೊಲಿನಾ, ಮುಖ್ಯಶಿಕ್ಷಕಿ ಮೆರೊನಿಕಾ, ರೋಟರಿ ಸಂಸ್ಥೆಗಳದ ಜಾನಕಿರಾಮ್, ವೆಂಕಟ್, ಡಾ.ಮಾಲಾ, ನಾದೊಸಿ, ಅಕ್ಷಯ ಚಾರಿಟಬಲ್ ಸಂಸ್ಥೆಯ ಅಧ್ಯಕ್ಷ ಲಕ್ಕಪ್ಪ ಇತರರಿದ್ದರು.