

ಅವಿನಾಶ್ ಜೈನಹಳ್ಳಿ ಮೈಸೂರು
ಜನಸಂಖ್ಯಾ ಸ್ಫೋಟ ತಡೆಯುವ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ (ನೋ ಸ್ಕಾಲ್‌ಪೆಲ್ ವ್ಯಾಸೆಕ್ಟಮಿ-ಎನ್‌ಎಸ್‌ವಿ)ಗೆ ಒಳಪಡುತ್ತಿರುವ ಪುರುಷರ ಸಂಖ್ಯೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪ್ರಸಕ್ತ 2023-24ನೇ ಸಾಲಿನಲ್ಲಿ ಈವರೆಗೆ ಒಬ್ಬರೂ ಎನ್‌ಎಸ್‌ವಿಗೆ ಒಳಪಟ್ಟಿಲ್ಲ. 2022-23 ರ ಸಾಲಿನಲ್ಲಿ ಇಬ್ಬರು ಮಾತ್ರ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು.
ಎನ್‌ಎಸ್‌ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಲೈಂಗಿಕ ಹಾಗೂ ದುಡಿಯುವ ಶಕ್ತಿ ಕುಂದುತ್ತದೆ ಎಂಬ ಮೂಢನಂಬಿಕೆಗೆ ಕಟ್ಟುಬಿದ್ದಿರುವ ಪುರುಷರು ಹಿಂದೇಟು ಹಾಕುತ್ತಿದ್ದಾರೆ. ಎನ್‌ಎಸ್‌ವಿ ವಿಚಾರ ಎತ್ತಿದರೆ ಮಾರು ದೂರ ಓಡುವ ಪುರುಷರ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ. ಮಹಿಳೆಯರಲ್ಲಿ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದೆ. ಆದರೆ ಪುರುಷರು ಇನ್ನೂ ಮೂಢನಂಬಿಕೆಗೆ ಜೋತು ಬಿದಿದ್ದಾರೆ. ಕುಟುಂಬ ಯೋಜನೆಯಲ್ಲಿ ಪುರುಷರು ಮಹಿಳೆಯರಷ್ಟೇ ಪ್ರಧಾನ ಪಾತ್ರ ವಹಿಸಲು ಆಸಕ್ತಿ ತೋರುತ್ತಿಲ್ಲ.
ಎನ್‌ಎಸ್‌ವಿ ಅನುಷ್ಠಾನದಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲಿ ತುಂಬ ಹಿಂದೆ ಇದೆ. ಪ್ರತಿ ತಿಂಗಳು ಜಿಲ್ಲೆಯಲ್ಲಿ ಒಂದರಿಂದ ಒಂದೂವರೆ ಸಾವಿರದಷ್ಟು ಮಹಿಳೆಯರು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡುತ್ತಿದ್ದಾರೆ. ಆದರೆ ಪುರುಷರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
2022-23ರ ಸಾಲಿನಲ್ಲಿ ಇಬ್ಬರು ಪುರುಷರು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಮಹಾಮಾರಿ ಕರೊನಾ ಕಾರಣದಿಂದ ಮೂರು ವರ್ಷಗಳ ಕಾಲ ಯಾವುದೇ ಪುರುಷರ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆದಿರಲಿಲ್ಲ. ಕೋವಿಡ್‌ಗೂ ಮೊದಲು 2018-19ರಲ್ಲಿ 4 ಮಂದಿ, 2017-18ನೇ ಸಾಲಿನಲ್ಲಿ 20 ಮಂದಿ ಪುರುಷರು ಮಾತ್ರ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಈ ಎರಡು ಅವಧಿಯಲ್ಲಿ ಮೈಸೂರು ತಾಲೂಕಿನಲ್ಲಿಯೇ 16 ಮಂದಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ 20 ಹಾಗೂ 2015-16ನೇ ಸಾಲಿನಲ್ಲಿ 30 ಮಂದಿ ಎನ್‌ಎಸ್‌ವಿಗೆ ಒಳಪಟ್ಟಿದ್ದಾರೆ.
ಎನ್‌ಎಸ್‌ವಿಯಿಂದ ಲೈಂಗಿಕ ಹಾಗೂ ದುಡಿಯುವ ಶಕ್ತಿ ಕುಂದುತ್ತದೆ ಎಂಬ ಮೂಢನಂಬಿಕೆ ಸಾಕಷ್ಟು ಮಂದಿಯಲ್ಲಿದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನೂರಾರು ಮಂದಿಯಲ್ಲಿ ಈ ರೀತಿಯ ಯಾವುದೇ ಲಕ್ಷಣಗಳು ಇದುವರೆಗೂ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಿದರೂ ಪುರಷರಲ್ಲಿ ನಿರಾಸಕ್ತಿ ಮುಂದುವರಿದಿದೆ. ಅದೆಲ್ಲ ಮಹಿಳೆಯರಿಗೆ ಬಿಟ್ಟ ವಿಚಾರ ಎಂಬ ತಾತ್ಸಾರವೇ ಇದಕ್ಕೆ ಕಾರಣವಾಗಿದ್ದು, ಈ ಭಾವನೆ ದೂರವಾಗಬೇಕಾಗಿದೆ.
ನೋ ಸ್ಕಾಲ್‌ಪೆಲ್ ವ್ಯಾಸೆಕ್ಟಮಿ ಅತ್ಯಂತ ಸರಳ ಶಸ್ತ್ರಚಿಕಿತ್ಸೆ. ಈ ಚಿಕಿತ್ಸಾ ಪದ್ಧತಿ ವೀರ್ಯಾಣುಗಳು ಗರ್ಭಾಶಯ ತಲುಪದಂತೆ ಮಾಡುತ್ತದೆ. ಇದು ಗಾಯ ಮತ್ತು ಹೊಲಿಗೆ ಇಲ್ಲದ ಚಿಕಿತ್ಸೆಯಾಗಿದ್ದು, ಕೇವಲ 5 ರಿಂದ 10 ನಿಮಿಷದಲ್ಲಿ ಚಿಕಿತ್ಸೆ ಮುಗಿದು ಕೇವಲ ಅರ್ಧ ಗಂಟೆಯಲ್ಲಿ ಮನೆಗೆ ಹೋಗಬಹುದು. ಎನ್‌ಎಸ್‌ವಿ ಚಿಕಿತ್ಸೆಯಿಂದ ಲೈಂಗಿಕ ಹಾಗೂ ದೈಹಿಕ ಶಕ್ತಿ ಕುಂದುವುದಿಲ್ಲ. ಸುಲಭದ ಕೆಲಸವಾಗಿದ್ದರೆ 48 ಗಂಟೆಗಳ ನಂತರ ಆರಂಭಿಸಬಹುದು. ಸೈಕಲ್ ತುಳಿಯುವುದು ಅಥವಾ ಇಂತಹುದೇ ಬೇರೆ ಕೆಲಸಗಳಾಗಿದ್ದಲ್ಲಿ 7 ದಿನಗಳ ನಂತರ ಮಾಡಬಹುದು.
‘ಹೊರುವ (ಗರ್ಭ ಧರಿಸುವ), ಹೆರುವ (ಜನ್ಮ ನೀಡುವ), ಮಕ್ಕಳಿಗೆ ಹಾಲುಣಿಸುವ ಹಾಗೂ ಕುಟುಂಬ ಗಾತ್ರ ದೊಡ್ಡದಾದಾಗ ಕುಟುಂಬ ಯೋಜನೆಗಳನ್ನು ಅನುಸರಿಸುವ ಎಲ್ಲ ಹೊರೆಯನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಹಾಗಾದರೆ, ಕುಟುಂಬ ಕಲ್ಯಾಣ ವಿಷಯದಲ್ಲಿ ಪುರುಷರ ಜವಾಬ್ದಾರಿ ಪಾಲಾದರೂ ಏನು ಎಂದು ಪ್ರಶ್ನಿಸುವುದು ಅಗತ್ಯವಾಗಿದೆ. ‘ನೋ ಸ್ಕಾಲ್‌ಪೆಲ್ ವ್ಯಾಸೆಕ್ಟವಿ’ ಒಂದು ಸರಳ ಹಾಗೂ ಸುರಕ್ಷಿತ ಚಿಕಿತ್ಸಾ ವಿಧಾನ. ಈ ಚಿಕಿತ್ಸೆಯಿಂದ ಪುರುಷರಲ್ಲಿ ಯಾವುದೇ ದೈಹಿಕ ನಿಶ್ಯಕ್ತಿ ಉಂಟಾಗುವುದಿಲ್ಲ. ತಮಗೆ ಮಕ್ಕಳು ಬೇಡವೆಂದು ನಿರ್ಧರಿಸುವ ಎಲ್ಲ ಪುರುಷರು ಎನ್‌ಎಸ್‌ವಿಯಲ್ಲಿ ಭಾಗವಹಿಸಬಹುದು. ಸಣ್ಣಪುಟ್ಟ ನೋವು ಬಿಟ್ಟರೆ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ. ಇದರಿಂದ ಮಹಿಳೆಯರ ಕಷ್ಟದಲ್ಲೂ ಭಾಗಿಯಾದಂತಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಎನ್‌ಎಸ್‌ವಿ ಶಸ್ತ್ರಚಿಕಿತ್ಸೆ ಕುರಿತು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜನರಿಗೆ ಈ ಪದ್ಧತಿ ಕುರಿತು ಸಂಪೂರ್ಣ ಮಾಹಿತಿ ಇದ್ದರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಈ ವರ್ಷ ಇಲ್ಲಿಯವರೆಗೂ ಒಬ್ಬರೂ ಎನ್‌ಎಸ್‌ವಿ ಚಿಕಿತ್ಸೆಗೆ ಒಳಪಟ್ಟಿಲ್ಲ. 2022-23ರ ಸಾಲಿನಲ್ಲಿ ಇಬ್ಬರು ಮಾತ್ರ ಚಿಕಿತ್ಸೆಗೆ ಒಳಪಟ್ಟಿದ್ದರು.ಡಾ.ಪಿ.ರವಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ