

ಮಡಿಕೇರಿ: ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರ ಸಹಭಾಗಿತ್ವ ಬಹಳ ಪ್ರಾಮುಖ್ಯವಾದದ್ದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ॥ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
೧೯೮೭ರ ಜುಲೈ ೧೧ ರಂದು ವಿಶ್ವ ಜನಸಂಖ್ಯೆ ೫೦೦ ಕೋಟಿ ತಲುಪಿದ ಕಾರಣ ಈ ದಿನ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರು ೨ ಮಕ್ಕಳನ್ನು ಹೊಂದಿರುವ ದಂಪತಿಗಳು ಶಾಶ್ವತ ಕುಟುಂಬ ಕಲ್ಯಾಣ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ಅರ್ಹ ದಂಪತಿಗಳು ಕುಟುಂಬ ಕಲ್ಯಾಣ ವಿಧಾನವನ್ನು ಅನುಸರಿಸಿ ಚಿಕ್ಕ ಕುಟುಂಬವನ್ನು ರೂಪಿಸಿಕೊಳ್ಳುವುದು. ಪಾಲಕರು ತಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ಕೊಡಬೇಕು. ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರ ಸಹಭಾಗಿತ್ವ ಬಹಳ ಪ್ರಾಮುಖ್ಯವಾದದ್ದು ಎಂದು ತಿಳಿಸಿದರು.
ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ದಯಾನಂದ ಮಾತನಾಡಿ, ಜನಸಂಖ್ಯಾ ಹೆಚ್ಚಳದಿಂದ ಆರ್ಥಿಕ ಅಭಿವೃದ್ಧಿ, ಉದ್ಯೋಗ, ಆದಾಯದ ಹಂಚಿಕೆ, ಬಡತನ ಸಾಮಾಜಿಕ ರಕ್ಷಣೆಯ ಮೇಲೆ ಪರಿಣಾಮ ಬೀರುತ್ತದೆ. ಗ್ರಾಮೀಣ ಭಾಗದಲ್ಲಿ ಗಂಡು ಮಗುವೆ ವಂಶೋದ್ಧಾರಕ, ಗಂಡು ಮಗು ಇಲ್ಲದಿದ್ದರೆ ಮೋಕ್ಷ ಸಿಗುವುದಿಲ್ಲ, ಗಂಡು ಮಗು ಜನಿಸುವವರೆಗೂ ಮಕ್ಕಳನ್ನು ಪಡೆಯಬೇಕು ಎಂಬ ಮೂಢ ನಂಬಿಕೆಯಿಂದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ದೇಚಮ್ಮ, ನಗರ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಮಟ್ಟದ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಮತ್ತು ತಾಲೂಕು ಆಶಾ ಮೆಂಟರ್ ಹಾಗೂ ತಾಲೂಕು ಮಟ್ಟದ ಆಶಾಕಾರ್ಯಕರ್ತೆಯರು ಭಾಗವಹಿಸಿದರು.