ಮೆಂದಾರೆ ಗ್ರಾಮಸ್ಥರು ಭಯಪಡುವ ಅಗತ್ಯ ಇಲ್ಲ

10 HANUR 3
ಮೆಂದಾರೆ ಗ್ರಾಮದಲ್ಲಿ ಸೋಲಿಗ ಮುಖಂಡರು ಹಾಗೂ ಪ್ರಗತಿಪರ ಚಿಂತಕರು ಸಭೆ ಆಯೋಜಿಸಿದ್ದರು. ಮುತ್ತಯ್ಯ, ಶಂಕನಪುರ ಮಹದೇವ, ದೊಡ್ಡಸಿದ್ದಯ್ಯ, ಅಬ್ರಹಾಂ ಡಿ ಸೆಲ್ವ ಇತರರು ಇದ್ದರು.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಮೆಂದಾರೆ ಗ್ರಾಮಕ್ಕೆ ಗುರುವಾರ ಸೋಲಿಗ ಮುಖಂಡರು ಹಾಗೂ ಪ್ರಗತಿಪರ ಚಿಂತಕರು ಭೇಟಿ ನೀಡಿ ಸಭೆ ನಡೆಸಿ ಗ್ರಾಮಸ್ಥರಿಗೆ ಧೈರ್ಯ ಹೇಳಿದರು.


ಈ ವೇಳೆ ಗ್ರಾಮಸ್ಥರು ಮಾತನಾಡಿ, ಮತದಾನ ಮಾಡಲು ತೆರಳಿದ್ದ ವೇಳೆ ಇಂಡಿಗನತ್ತ ಗ್ರಾಮಸ್ಥರು ನಮ್ಮ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಈ ಸಂಬಂಧ ಗಲಭೆಯಲ್ಲಿ ಭಾಗಿಯಾದವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಶಾಲೆ ಆರಂಭವಾಗಲಿದ್ದು ನಮ್ಮ ಮಕ್ಕಳನ್ನು ಇಂಡಿಗನತ್ತ ಶಾಲೆಗೆ ಕಳುಹಿಸಬೇಕು. ಶಾಲೆಗೆ ಹಾಗೂ ಕೆಲಸ ಕಾರ್ಯದ ನಿಮಿತ್ತ ಮ.ಬೆಟ್ಟಕ್ಕೆ ತೆರಳಬೇಕಾದರೆ ಇಂಡಿಗನತ್ತದ ಮೂಲಕವೇ ತೆರಳಬೇಕು. ಇನ್ನು ಜಮೀನಿಲ್ಲದ ನಾವು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ ಘಟನೆಯಿಂದ ಕೂಲಿ ಮಾಡುವುದಕ್ಕೂ ಸಾಧ್ಯವಿಲ್ಲದಂತಾಗಿದೆ. ಹಾಗಾಗಿ ಇಂಡಿಗನತ್ತ ಗ್ರಾಮಸ್ಥರು ದ್ವೇಷದಿಂದ ನಮ್ಮ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಹೆಚ್ಚಿದೆ. ಇದರಿಂದ ನಮಗೆ ಜೀವಭಯ ಕಾಡುತ್ತಿದ್ದು, ಊರನ್ನೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಮಗೆ ಸೂಕ್ತ ರಕ್ಷಣೆ ಒದಗಿಸಿ ಕೊಡುವಂತೆ ಮನವಿ ಮಾಡಿದರು.


ಇದೇ ವೇಳೆ ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡಸಿದ್ದಯ್ಯ ಮಾತನಾಡಿ, ಮತಗಟ್ಟೆ ಧ್ವಂಸ ಪ್ರಕರಣದಿಂದ ಬೇಡಗಂಪಣ ಲಿಂಗಾಯತ ಹಾಗೂ ಸೋಲಿಗ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲದಂತಾಗಿದೆ ಎಂದು ತಿಳಿಸಿದರು.


ಈ ವೇಳೆ ಪ್ರಗತಿಪರ ಚಿಂತಕರು ಹಾಗೂ ಗಿರಿಜನ ಮುಖಂಡರು ಮಾತನಾಡಿ, ಘಟನೆ ಸಂಬಂಧ ಸತ್ಯಾಸತ್ಯತೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ರಕ್ಷಣೆ ನೀಡುವ ನಿಟ್ಟಿನಲ್ಲಿ ಸದಾ ನಿಮ್ಮ ಜತೆಗಿರುತ್ತೇವೆ. ಆದ್ದರಿಂದ ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಮುಖಂಡರ ಸಭೆ ನಡೆಸಿ ಎಂದಿನಂತೆ ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗುವುದು. ಏನಾದರೂ ಸಮಸ್ಯೆ ತಲೆದೋರಿದ್ದಲ್ಲಿ ಗಮನಕ್ಕೆ ತರುವಂತೆ ಸಲಹೆ ನೀಡಿದರು.


ರಾಜ್ಯ ಮೂಲ ಆದಿವಾಸಿ ಬುಡಕಟ್ಟು ಜನರ ವೇದಿಕೆ ಕಾರ್ಯದರ್ಶಿ ಮುತ್ತಯ್ಯ, ಹಿರಿಯ ರಂಗಕರ್ಮಿ ವೆಂಕಟರಾಜು, ಸಾಹಿತಿ ಶಂಕನಪುರ ಮಹದೇವ, ಪುನರ್ವಸತಿ ಸಂಸ್ಥೆಯ ಡಾ. ವೀರಭದ್ರನಾಯ್ಕ, ವೆಂಕಟರಾಜು, ಅಬ್ರಹಾಂ ಡಿ ಸೆಲ್ವ, ಸ್ಥಳೀಯ ಮುಖಂಡರಾದ ಗಿರಿಯಾ, ಚಂದು, ಗಿರೀಶ್‌ಕುಮಾರ್, ಮಾದಯ್ಯ, ಸಣ್ಣಪ್ಪಿ, ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net