

ಜಮಖಂಡಿ: ಸ್ಥಳೀಯ ಪ್ರಭಾತ ನಗರದಲ್ಲಿ ಕಳ್ಳರ ಗುಂಪು ಕಳ್ಳತನ ಯತ್ನ ನಡೆಸಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿರುವ ದೃಶ್ಯಗಳು ನಗರದ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ನಗರದ ಪ್ರಭಾತ ನಗರದಲ್ಲಿ ಎರಡು ಮನೆಗಳ ಬಾಗಿಲಿನ ಕೊಂಡಿ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಇಡಿ ಪ್ರಭಾತ ನಗರ ಸಿಸಿ ಟಿವಿಗಳ ಕಣ್ಗಾವಲಿನಲ್ಲಿರುವುದರಿಂದ ಕಳ್ಳರ ಗುಂಪಿನ ಚಲನವಲನಗಳು ಸೆರೆಯಾಗಿವೆ. ರವಿ ತೇಲಿ ಅವರ ನಿವಾಸದ ಕಿಟಕಿ ಮುರಿದಿದ್ದಾರೆ. ತೆಗ್ಗಿ ಅವರ ಕಚೇರಿ ಕೀಲಿ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ.
ಅಂದಾಜು 7 ಜನರು ತಲೆಗೆ ಮಂಕಿ ಕ್ಯಾಪ್, ಬಟ್ಟೆಗಳಿಂದ ಮುಖ ಮುಚ್ಚಿಕೊಂಡಿರುವ ಕಳ್ಳರ ಗುಂಪು ಬಡಾವಣೆ ತುಂಬ ಸುತ್ತಾಡಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ಒಂದೂವರೆ ತಿಂಗಳಿನಿಂದ ಕೋಷ್ಠಿ ಗಲ್ಲಿ, ಸಿದ್ದಮುತ್ಯಾ ಗುಡಿ, ಹೊಕ್ಕಳ ಬಾವಿ ಸೇರಿ ನಗರದ ವಿವಿಧೆಡೆ 13 ಮನೆಗಳಿಗೆ ಇದೆ ಮಾದರಿಯಲ್ಲಿ ಕಳ್ಳತನ ಯತ್ನ ನಡೆದಿದ್ದರೂ ಪೊಲೀಸರು ಯಾವುದೇ ಮುಂಜಾಗ್ರತೆ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.