ಕಲಘಟಗಿಯಲ್ಲಿ ಬೀದಿ ನಾಯಿಗಳ ಹಾವಳಿ

30-klg 1 DOG
Published on

ಕಲಘಟಗಿ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನೇದಿನೆ ಹೆಚ್ಚುತ್ತಿದ್ದು, ಸಾರ್ವಜನಿಕರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಮೇ ತಿಂಗಳ ಒಂದೇ ವಾರದಲ್ಲಿ ನಾಲ್ಕೈದು ಜನರನ್ನು ಕಚ್ಚಿ ಗಾಯಗೊಳಿಸಿವೆ. ಬೀದಿನಾಯಿಗಳ ಹಾವಳಿಯಿಂದಾಗಿ ಸಾರ್ವಜನಿಕರು ಮತ್ತು ಮಕ್ಕಳು ಭಯಭೀತರಾಗಿದ್ದಾರೆ.

ಪಟ್ಟಣದ ಚಾವಡಿಕೂಟ್, ಟಿಎಂಸಿ ಮಾರುಕಟ್ಟೆ, ಎಪಿಎಂಸಿ, ರೈಸ್ ಮಿಲ್, ಮೀನು ಮಾರ್ಕೆಟ್, ಬಮ್ಮಿಗಟ್ಟಿ ಕ್ರಾಸ್ ಹಾಗೂ ಅಕ್ಕಿ ಓಣಿ ಸೇರಿ ಮತ್ತಿತರೆಡೆ ಶ್ವಾನಗಳ ಸಂಖ್ಯೆ ಮಿತಿಮೀರಿದೆ. ಪಟ್ಟಣದ ಎಲ್ಲೆಂದರಲ್ಲಿ ಕಸದ ರಾಶಿ, ಚರಂಡಿ, ಕೊಳಚೆ ನೀರು ಹಾಗೂ ಮಾಂಸದ ತುಂಡುಗಳನ್ನು ಎಸೆಯುವಲ್ಲಿ ಶ್ವಾನಗಳು ಹೆಚ್ಚಾಗಿ ಕಂಡುಬರುತ್ತವೆ. ಆ ಸಂದರ್ಭದಲ್ಲಿ ದಾರಿಹೋಕರ ಮೇಲೆರಗಿ ಕಚ್ಚಿ ಗಾಯಗೊಳಿಸುತ್ತಿವೆ. ನಾಯಿಗಳ ಕಾಟ ತಪ್ಪಿಸುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಶಾಲಾ ಮಕ್ಕಳು ಮನೆಗೆ ತೆರಳುವಾಗ, ಮರಳುವಾಗ ಅವರ ಮೇಲೆ ದಾಳಿ ಮಾಡುವ ಶ್ವಾನಗಳು ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಮತ್ತು ವಾಪಸ್ ಕರೆತರುವಂತೆ ಮಾಡಿವೆ. ಪಟ್ಟಣದ ಕೆಲವೆಡೆ ಬೀದಿನಾಯಿಗಳು ಹಿಂಡು ಹಿಂಡಾಗಿ ಗುಂಪುಗೂಡಿ ಕಚ್ಚಾಡುವುದು ಸಹಜವಾಗಿಯೇ ಕಂಡುಬರುತ್ತಿದೆ. ಈ ವೇಳೆ ಅಕ್ಕಪಕ್ಕದಲ್ಲಿ ಮಕ್ಕಳು, ವಯಸ್ಸಾದವರು ಹಾದು ಹೋಗುತ್ತಿದ್ದರೆ, ಏಕಾಏಕಿ ಅವರ ಮೇಲೆರಗಿ ಗಾಯಗೊಳಿಸುತ್ತಿವೆ. ಇದರಿಂದಾಗಿ ಜೀವಭಯದಲ್ಲೇ ಸಂಚರಿಸುವಂತಾಗಿದೆ.

ಪ್ರತಿದಿನ ಬೆಳಗ್ಗೆ ವಾಯುವಿಹಾರಕ್ಕೆ ಬರುವ ಯುವಕರು ಮೇಲೂ ದಾಳಿ ನಡೆಸುವ ಬೀದಿನಾಯಿಗಳ ಹಿಂಡು ಕಚ್ಚಿ ಗಾಯಗೊಳಿಸುತ್ತಿವೆ. ಬೈಕ್ ಸವಾರರ ಕಾಲಿಗೆ ಕಚ್ಚಿ ಗಾಯಗೊಳಿಸಿ ಅಪಘಾತಗಳು ಸಂಭವಿಸುವಂತೆ ಮಾಡುತ್ತಿವೆ. ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವ ಕುರಿತು ಸಾರ್ವಜನಿಕರಿಂದ ಪಟ್ಟಣ ಪಂಚಾಯಿತಿಗೆ ದೂರು ಬಂದಿದೆ. ಲೋಕಸಭೆ ಚುನಾವಣೆ ಹಾಗೂ ಕೆಲ ತಿಂಗಳಿನಿಂದ ಪಪಂನಲ್ಲಿ ಅಧಿಕಾರಿಗಳ ಕೊರತೆ ಇರುವುದಿಂದಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಆದಷ್ಟು ಶೀಘ್ರ ಕ್ರಮ ಜರುಗಿಸಲಾಗುವುದು. | ವಿ.ಜಿ. ಅಂಗಡಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ, ಕಲಘಟಗಿ

ಮಾರುಕಟ್ಟೆ ಹಾಗೂ ಟ್ಯೂಷನ್​ಗಳಿಗೆ ತೆರಳುವ ಮಕ್ಕಳಿಗೆ ಬೀದಿನಾಯಿಗಳು ಕಚ್ಚುತ್ತಿವೆ. ಕಳೆದ ತಿಂಗಳು 9 ವರ್ಷದ ನನ್ನ ಮಗಳಿಗೆ ಎರಡು ಬಾರಿ ಕಚ್ಚಿ ಗಾಯಗೊಳಿಸಿವೆ. ಮನೆ ಸುತ್ತಮುತ್ತಲಷ್ಟೇ ಅಲ್ಲದೇ ಪಟ್ಟಣದಾದ್ಯಂತ ನಾಯಿ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕು. | ಬಸವರಾಜ ಹಟಗಾರ. ಪಟ್ಟಣದ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net