ಬಿಡಾಡಿ ದನಗಳು, ಬೀದಿ ನಾಯಿಗಳ ಹಾವಳಿ

18 Dwd 2
Published on

ಧಾರವಾಡ: ನಗರದಲ್ಲಿ ಬಿಡಾಡಿ ದನಗಳು, ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವುಗಳಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ.

ದನಗಳು ಇಡೀ ದಿನ ಮಾರುಕಟ್ಟೆ ಪ್ರದೇಶ, ಜನವಸತಿ ಬಡಾವಣೆಗಳಲ್ಲಿ ಆಹಾರ ಅರಸುತ್ತ ಸಂಚರಿಸುತ್ತವೆ. ಕೆಲವೊಮ್ಮೆ ದನಗಳ ಹಿಂಡು ರಸ್ತೆ ಮಧ್ಯೆ ಮಲಗುತ್ತವೆ. ಇವುಗಳನ್ನು ದಾಟಿ ವಾಹನ ಸವಾರರು ಸಾಗುವುದು ಕಷ್ಟಕರ. ಇನ್ನು ನಗರದ ಮಾರುಕಟ್ಟೆ ಪ್ರದೇಶದಲ್ಲಿ ದನಗಳು ಸದಾ ಬೀಡು ಬಿಟ್ಟಿರುತ್ತವೆ. ತರಕಾರಿ, ಸೊಪ್ಪು, ಕಾಳು, ಹಣ್ಣುಗಳನ್ನು ತಿನ್ನುತ್ತವೆ. ದನಗಳನ್ನು ಓಡಿಸುವುದೇ ವ್ಯಾಪಾರಸ್ಥರಿಗೆ ಸವಾಲು.

ಕೆಲ ಸಂಧರ್ಭಗಳಲ್ಲಿ ಬಿಡಾಡಿ ದನಗಳು ವಾಹನ ಸವಾರರಿಂದ ಅಪಘಾತಕ್ಕಿಡಾಗಿ ಗಾಯಗೊಂಡು ನರಕಯಾತನೆ ಅನುಭವಿಸಿದ ನಿದರ್ಶನಗಳಿವೆ. ಪ್ರಾಣಿ ಪ್ರಿಯರು, ಸಾಮಾಜಿಕ ಕಾರ್ಯಕರ್ತರ ಕಣ್ಣಿಗೆ ಬಿದ್ದರೆ ಮಾತ್ರ ಪಶು ವೈದ್ಯರಿಂದ ಚಿಕಿತ್ಸೆ ಸಿಗುತ್ತದೆ. ಇಲ್ಲದಿದ್ದರೆ ಗಾಯಾಳು ದನಗಳು ತೊಂದರೆ ಅನುಭವಿಸುವುದು ಸಾಮಾನ್ಯ.

ಮತ್ತೊಂದೆಡೆ ನಗರದ ಅನೇಕ ಬೀದಿಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಸೂಪರ್ ಮಾರುಕಟ್ಟೆಯಲ್ಲಂತೂ ನಾಯಿಗಳ ಹಿಂಡು ಬೀಡು ಬಿಟ್ಟಿದೆ. ಜನ ಮಾರುಕಟ್ಟೆಯಲ್ಲಿ ಭಯದಿಂದ ಸಂಚರಿಸುವ0ತಾಗಿದೆ.

ಬೀದಿನಾಯಿಗಳು ಪಾದಚಾರಿಗಳು ಮತ್ತು ವಾಹನ ಸವಾರರ ಮೇಲೆ ದಾಳಿ ಮಾಡಿದ ಉದಾಹರಣೆ ಇವೆ. ಈ ಕುರಿತು ಮಹಾನಗರ ಪಾಲಿಕೆಗೆ ಹಲವಾರು ಬಾರಿ ಮಹಾನಗರ ಪಾಲಿಕೆ ಅಽಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ.

- ಉದಯ ಯಂಡಿಗೇರಿ, ವ್ಯಾಪಾರಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net