ಯುವತಿಯ ಅಪಹರಣ ಆರೋಪ, ಸ್ಥಳೀಯರಿಂದ ಯುವಕನ ಮನೆಗೆ ಮುತ್ತಿಗೆ

virtual kidnapping
Published on

ಈಶ್ವರಮಂಗಲ: ಪುತ್ತೂರು ತಾಲೂಕಿನ ಕೊಳ್ತಿಗೆ ಕುಂಟಿಕಾನ ಎಂಬಲ್ಲಿ ಸಿದ್ಧೀಕ್ ಎಂಬಾತ ಅಪ್ರಾಪ್ತ ವಯಸ್ಸಿನ ಹಿಂದು ಯುವತಿಯನ್ನು ಅಪಹರಿಸಿ ಮನೆಯಲ್ಲಿ ಇರಿಸಿಕೊಂಡಿದ್ದಾನೆಂಬ ಮಾಹಿತಿಯರಿತ ಸ್ಥಳೀಯರು ಬುಧವಾರ ಆತನ ಮನೆಯ ಮುಂದೆ ಜಮಾಯಿಸಿ ಸ್ಥಳದಲ್ಲಿ ತುಸು ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಬೆಳ್ಳಾರೆ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಾಗ ಯುವಕನ ಮನೆಯವರು ಬಾಗಿಲು ತೆರೆಯದೆ ಇದ್ದುದು, ಇನ್ನಷ್ಟು ಸಂಶಯಕ್ಕೆ ಕಾರಣವಾಯಿತು. ಕೆಲಹೊತ್ತು ಕಾದ ಪೊಲೀಸರು ಮನೆಯ ಬಾಗಿಲು ತೆರೆದ ಬಳಿಕ ಮನೆಯೊಳಗೆ ಹೋಗಿ ಹುಡುಕಾಡಿದಾಗ ಯುವತಿ ಮನೆಯೊಳಗೆ ಇರಲಿಲ್ಲ. ಈ ವೇಳೆ ಅಲ್ಲಿ ಸೇರಿದ್ದ ಮಂದಿ ಯುವತಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದರು. ಗೊಂದಲ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ಜನರನ್ನು ಅಲ್ಲಿಂದ ಚದುರಿಸಿ, ಯುವಕ ಸಿದ್ಧೀಕ್‌ನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ವಿವಾಹವಾಗಲು ಸಿದ್ಧತೆ: ಫೋನ್ ಮೂಲಕ ಪರಿಚಯವಾದ ಕಾಸರಗೋಡು ಜಿಲ್ಲೆಯ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ದೇಲಂಪಾಡಿಯ ದಲಿತ ಸಮುದಾಯದ ಯುವತಿಯನ್ನು ಆಕೆಯ ಮನೆಯಿಂದ ಕಾರಿನಲ್ಲಿ ಮನೆಗೆ ಕರೆದುಕೊಂಡು ಬಂದಿದ್ದೆ. ಯಾರಿಗಾದರೂ ತಿಳಿದರೆ ಸಮಸ್ಯೆಯಾಗಬಹುದೆಂದು ಆಕೆಯನ್ನು ಪುತ್ತೂರಿಗೆ ಬಿಟ್ಟು ಬಂದಿದ್ದೇನೆ. ಒಂದು ವರ್ಷದಿಂದ ಪರಿಚಯವಿದ್ದು, ವಿವಾಹ ಮಾಡಿಕೊಳ್ಳುವಂತೆ ತಿಳಿಸಿದ್ದಾಳೆ ಎಂದು ಆತ ಪೊಲೀಸರ ಮುಂದೆ ತಿಳಿಸಿದ್ದಾನೆ.
ಬೆಳ್ಳಾರೆ ಪೊಲೀಸರು ಯುವತಿಯ ಮನೆಯವರನ್ನು ಸಂಪರ್ಕಿಸಿದ್ದಾರೆ. ಯುವತಿ 17 ವರ್ಷದವಳಾಗಿದ್ದು, ಅಪ್ರಾಪ್ತೆಯಾದ ಆಕೆಯನ್ನು ಅಪಹರಿಸಿದ ದೂರು ನೀಡುವುದಾಗಿ ಪಾಲಕರು ಪೊಲೀಸರಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net