

ಕಾಸರಗೋಡು: ಜಿಲ್ಲೆಯ ಜನತೆ ಪ್ಯಾಸೆಂಜರ್ ರೈಲುಗಳ ಕೊರತೆಯಿಂದ ಎದುರಿಸುತ್ತಿರುವ ಸಂಚಾರ ಸಮಸ್ಯೆ ಪರಿಹರಿಸಲು ಮೆಮು ರೈಲು ಸೇವೆಯನ್ನು ಮಂಗಳೂರುವರೆಗೆ ವಿಸ್ತರಿಸಬೇಕೆಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಒತ್ತಾಯಿಸಿತು.
ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸಕ್ತ ಕಣ್ಣೂರು ಮತ್ತು ಮಂಗಳೂರು ನಡುವೆ ಒಂದು ಪ್ರಯಾಣಿಕ ರೈಲು ಸಂಚಾರ ನಡೆಸುತ್ತಿದೆ. ಇದು ಪ್ರತಿ ದಿನ ಪ್ರಯಾಣಿಕರ ದಟ್ಟಣೆಯಿಂದ ಸಂಚರಿಸುತ್ತಿದ್ದು, ನೂರಾರು ಮಂದಿ ಕಾರ್ಮಿಕರು, ಕಚೇರಿ ಕೆಲಸಗಾರರು, ವಿದ್ಯಾರ್ಥಿಗಳು ಮತ್ತು ರೋಗಿಗಳು ಇದೇ ರೈಲನ್ನು ಅವಲಂಬಿಸಿದ್ದಾರೆ. ಶೋರ್‌ನೂರಿನಿಂದ ಕಣ್ಣೂರು ಆಗಮಿಸುವ ರೈಲು ಒಂಭತ್ತು ತಾಸುಗಳ ಕಾಲ ಕಣ್ಣೂರು ನಿಲ್ದಾಣದಲ್ಲೇ ತಂಗುತ್ತಿದ್ದು, ಈ ರೈಲನ್ನು ಮಂಗಳೂರಿಗೆ ವಿಸ್ತರಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗಲಿರುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಾಸರಗೋಡು ಜಿಲ್ಲೆಯಲ್ಲಿ ಸಮುದ್ರ ಕೊರೆತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆಗ್ರಹಿಸಿದೆ. ಬ್ಯಾರಿ ಭಾಷೆ ಮಾತನಾಡುವವರಿಗೆ ಕನ್ನಡ ಮಾತೃಭಾಷಾ ಪ್ರಮಾಣಪತ್ರ ನೀಡಲು ಪ್ರಸಕ್ತ ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಶಾಸಕ ಎಂ.ರಾಜಗೋಪಾಲನ್ ನಿರ್ಣಯ ಮಂಡಿಸಿದರು. ಶಾಸಕರಾದ ಸಿ.ಎಚ್.ಕುಂಞಂಬು, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್ ವರದಿ ಮಂಡಿಸಿದರು.