ಪಣಿಯೂರು ನಿಲ್ದಾಣದಲ್ಲಿ ಮೆಮು ಎಕ್ಸ್‌ಪ್ರೆಸ್ ರೈಲು ನಿಲುಗಡೆ

pdb (3)
Published on

ಪಡುಬಿದ್ರಿ: ಬೆಳಪು ಗ್ರಾಮದ ಪಣಿಯೂರು(ಪಡುಬಿದ್ರಿ) ರೈಲು ನಿಲ್ದಾಣದಲ್ಲಿ ಸೋಮವಾರದಿಂದ ಮಂಗಳೂರು- ಮಡಂಗಾವ್ (ಗೋವಾ) ಎಕ್ಸ್‌ಪ್ರೆಸ್ ರೈಲು ನಿಲುಗಡೆ ಆರಂಭಗೊಂಡಿದೆ. ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಪಣಿಯೂರು ನಿಲ್ದಾಣದಲ್ಲಿ ರೈಲನ್ನು ಸ್ವಾಗತಿಸಿ, ಗೋವಾದಿಂದ ರೈಲು ಚಲಾಯಿಸಿಕೊಂಡು ಬಂದ ಲೋಕೋಪೈಲಟನ್ನು ಗೌರವಿಸಲಾಯಿತು. ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಪಣಿಯೂರು ರೈಲು ನಿಲ್ದಾಣದ ಅಭಿವೃದ್ಧಿ, ಗೋವಾ ಎಕ್ಸ್‌ಪ್ರೆಸ್, ಮುಂಬೈ, ಬೆಂಗಳೂರು ರೈಲು ನಿಲುಗಡೆಗೆ ಅವಕಾಶ ನೀಡುವಂತೆ ಹಲವು ವರ್ಷಗಳಿಂದ ಬೇಡಿಕೆ ನೀಡುತ್ತಾ ಬಂದಿದ್ದೇವೆ. ನಮ್ಮ ಹೋರಾಟಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೆಂಬಲ ನೀಡಿದ್ದು ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಮೂಲಕವಾಗಿ ಬೇಡಿಕೆ ಈಡೇರಿಸಿದ್ದಾರೆ ಎಂದರು. ರೈಲು ನಿಲ್ದಾಣ ಅಭಿವೃದ್ದಿಗೆ ಪೂರಕವಾಗಿ ಗ್ರಾಪಂ ನೇತೃತ್ವದಲ್ಲಿ ಅದಾನಿ ಸಿಎಸ್‌ಆರ್ ಅನುದಾನದಲ್ಲಿ 15 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದ್ದು ಮುಂದಿನ ಕಾಮಗಾರಿಗೆ ಮತ್ತೆ 20 ಲಕ್ಷ ರೂ. ಸಿಎಸ್‌ಆರ್ ಅನುದಾನ ಬಳಸಲಾಗುವುದು. ಸೋಲಾರ್ ದೀಪಗಳ ಅಳವಡಿಕೆಗೂ ಒತ್ತು ನೀಡಲಾಗುವುದು ಎಂದರು. ಹೋರಾಟ ಸಮಿತಿಯ ರಾಕೇಶ್ ಕುಂಜೂರು, ಗ್ರಾಮಸ್ಥರು, ಸ್ಟೇಷನ್ ಮಾಸ್ಟರ್ ಶಂಕರನ್, ಸಿಬ್ಬಂದಿ ಸುಜಿತ್, ಆದೇಶ್ ಹೆಗ್ಡೆ, ಲಲಿತಾ, ಶಾಂತಾ, ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net