ಕೋಟೆನಾಡಲ್ಲಿ ರಾಮದೂತನ ಸ್ಮರಣೆ

09 CTD 30
Published on

ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲಾದ್ಯಂತ ಶ್ರಾವಣ ಮಾಸದ ಕಡೇ ಶನಿವಾರ ರಾಮದೂತ ಆಂಜನೇಯಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.

ಮುಂಜಾನೆಯಿಂದಲೇ ಅಭಿಷೇಕ, ಬೆಣ್ಣೆ, ನವ ಧಾನ್ಯಗಳು, ವಿವಿಧ ಬಗೆಯ ಪುಷ್ಪ, ಹಾರ ಹಾಗೂ ವಿವಿಧ ವಸ್ತುಗಳಿಂದ ವಿಶೇಷ ಅಲಂಕಾರ ಸೇವೆ ನೆರವೇರಿತು. ಬೆಳಗ್ಗೆಯಿಂದ ರಾತ್ರಿ 9ರವರೆಗೂ ಸಾವಿರಾರು ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಕ್ಷೇಮದಾತ ಆಂಜನೇಯನ ದರ್ಶನ ಪಡೆದರು.

ಕುಟುಂಬದ ಒಳಿತಿಗಾಗಿ ಹಲವರು ಪೂಜಾ ಸಾಮಗ್ರಿ ಸಮರ್ಪಿಸಿ, ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಸುಪ್ರಭಾತ, ಸ್ತೋತ್ರ, ಕೀರ್ತನೆ ಸೇರಿ ವಿವಿಧ ಭಕ್ತಿ ಗೀತೆಗಳ ಮೂಲಕ ಭಕ್ತರು ಭಕ್ತಿಯಲ್ಲಿ ಮಿಂದೆದ್ದರು.

ಹೊರವಲಯದ ತಮಟಕಲ್ಲು, ಕಣಿವೆ, ಮಾನಂಗಿ, ಹೊಳಲ್ಕೆರೆ ರಸ್ತೆ 8ನೇ ಮೈಲು, ಬರಗೇರಿ, ಹೌಸಿಂಗ್ ಬೋರ್ಡ್ ಕಾಲನಿಯ ಪಂಚಮುಖಿ ಆಂಜನೇಯ, ಬುರುಜನಹಟ್ಟಿ ತಗ್ಗಿನ ಆಂಜನೇಯ, ಕೋಟೆ, ಆನೆಬಾಗಿಲು, ರಂಗಯ್ಯನ ಬಾಗಿಲು ಸಮೀಪದ ಆಂಜನೇಯ, ಜಿಲ್ಲಾ ಕ್ರೀಡಾಂಗಣ ಮಾರ್ಗದ ವೀರಾಂಜನೇಯ, ಮದಕರಿನಾಯಕ ವೃತ್ತ ಸಮೀಪದ ರಕ್ಷಾಂಜನೇಯ ಸೇರಿ ವಿವಿಧ ಆಂಜನೇಯ ಸ್ವಾಮಿ ದೇಗುಲಗಳಲ್ಲಿ ಪೂಜಾ ಕೈಂಕರ್ಯ ನೆರವೇರಿದವು.

ಸಿಹಿನೀರು ಹೊಂಡದ ಏರಿ ಮೇಲಿನ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಅತ್ಯಾಕರ್ಷಕವಾಗಿ ಅಲಂಕರಿಸಿ, ಐತಿಹಾಸಿಕ ಚಂದ್ರವಳ್ಳಿವರೆಗೂ ಭವ್ಯ ಮೆರವಣಿಗೆ ನಡೆಸಿ, ಜಲ ಪೂಜೆ ನೆರವೇರಿಸಲಾಯಿತು. ನೆರೆದಿದ್ದ ಭಕ್ತರಿಗೆ ವಿವಿಧೆಡೆ ಪ್ರಸಾದ, ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net