

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಜೆ ಸಮಯದಲ್ಲಿ ಬಾನಾಡಿಗಳು ತಮ್ಮ ಕಲರವದೊಂದಿಗೆ ಗೂಡು ಸೇರುವ ಸಮಯ. ಇದೇ ಸಂದರ್ಭದಲ್ಲಿ ಧಾರವಾಡ ತೇಜಸ್ವಿನಗರದ ಕೃಷ್ಣ ಅಂಬೇಕರ ದಂಪತಿ ಮನೆ ಅಂಗಳ ಸಂಗೀತದ ರಸಮಾಧುರ್ಯದಿಂದ ಆವರಿಸಿಕೊಂಡಿತ್ತು. ಅವರ ಹಿರಿಯ ಮಗ, ತಬಲಾ ಆನಂದ ಖ್ಯಾತಿಯ ಆನಂದ ಅಂಬೇಕರ ಸಂಸ್ಮರಣೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 11ನೇ ವರ್ಷದ ನೆನಪು ಸಂಗೀತ ಸಂಜೆಯ ಸಪ್ತಸ್ವರಗಳ ನಿನಾದ ಹೃನ್ಮನ ಸೆಳೆಯಿತು.
ದೀಪ್ತಿ ಭಟ್ಟ ಪ್ರಾರ್ಥನಾ ಗೀತೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಹಿರಿಯ ತಬಲಾ ಕಲಾವಿದ ಪಂ. ರಘುನಾಥ ನಾಕೋಡ ತಬಲಾ ಸೋಲೊ ಮೂಡಿಬಂತು. ಪೇಶಕಾರ, ಕಾಯದಾ, ಚಕ್ರಧಾರ, ರೇಲಾ ಹೀಗೆ ತಮ್ಮ 60 ವರ್ಷಗಳ ಸಾಧನೆ ಮೆಲಕನ್ನು ತಬಲಾ ವಾದನದ ಮೂಲಕ ಪ್ರದರ್ಶಿಸಿದರು. ಅವರಿಗೆ ಬಿ. ಆಂಜನೇಯ ಲೆಹರಾ ಸಾಥ್ ನೀಡಿದರು.
ಹುಬ್ಬಳ್ಳಿಯ ಸುಜಯೀಂದ್ರ ಕುಲಕರ್ಣಿ ಗಾಯನವನ್ನು ಶ್ಯಾಮಕಲ್ಯಾಣ್ ರಾಗದೊಂದಿಗೆ ಆರಂಭಿಸಿದರು. ಮೂರು ಲಯಗಳಲ್ಲಿ ನಿರಾತಂಕವಾಗಿ ಅವರ ಗಾಯನ ಮೂಡಿಬಂತು. ನಂತರ ದಾಸರ ಪದಗಳು, ಮರಾಠಿ ಅಭಂಗಗಳನ್ನು ಪ್ರಸ್ತುತಪಡಿಸಿದರು. ಕೊನೆಯಲ್ಲಿ ಭೈರವಿ ರಾಗದೊಂದಿಗೆ ಸಂಗೀತ ಸಂಜೆಗೆ ತೆರೆ ಎಳೆದರು. ಅವರಿಗೆ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ, ಹಾರ್ಮೊನಿಯಂದಲ್ಲಿ ಸತೀಶ ಭಟ್ಟ ಹೆಗ್ಗಾರ, ದೀಪ್ತಿ ಭಟ್ಟ, ಸಮನ್ವಿತ ತಂಬೂರಿ ಸಾಥ್ ನೀಡಿದರು.
ಪಂ. ರಾಚಯ್ಯ ಹಿರೇಮಠ, ಪಂ. ಜಯತೀರ್ಥ ಮೇವುಂಡಿ, ಪಂ. ಮಲ್ಲಿಕಾರ್ಜುನ ತರ್ಲಘಟ್ಟ, ಪಂ. ಶ್ರೀನಿವಾಸ ಜೋಶಿ, ಪಂ. ಶ್ರೀಕಾಂತ ಕುಲಕರ್ಣಿ, ಪಂ. ಶಶಿಧರ ನರೇಂದ್ರ, ಕರ್ನಲ್ ಕಿರಣ ಹೆಗಡೆ, ಮೇಜರ್ ಆರತಿ, ಮೇಜರ್ ಸುಮೇದ, ಆನಂದರ ಮಿತ್ರರು, ಅಂಬೇಕರ ಕುಟುಂಬಸ್ಥರು, ಇತರರು ಇದ್ದರು. ಡಾ. ಹರೀಶ ಹೆಗಡೆ ನಿರೂಪಿಸಿದರು.