ಮಹಿಳಾ ಭವನ ನಿರ್ಮಾಣವಾಗಲಿ: ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಒತ್ತಾಯ

Memorial gift distribution program Mandya
Published on

ಮಂಡ್ಯ: ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನ ನೆನಪಿಗಾಗಿ ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಭವನ ನಿರ್ಮಾಣಕ್ಕೆ ಮಹಿಳೆಯರಿಂದ ಆಶಯ ವ್ಯಕ್ತವಾಗಿದೆ ಎಂದು ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಸಮ್ಮೇಳನದ ಮಹಿಳಾ ಸಮಿತಿ ಮತ್ತು ಸಮನ್ವಯ ಸಮಿತಿಯಿಂದ ಆಯೋಜಿಸಿದ್ದ ನುಡಿಜಾತ್ರೆ ಯಶಸ್ಸಿಗೆ ಶ್ರಮಿಸಿದವರಿಗೆ ನೆನಪಿನ ಕಾಣಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ 3 ದಿನದ ಸಮ್ಮೇಳನ ಯಶಸ್ಸಿಯಾಗಿ ನಡೆದಿದೆ. ಮೊದಲ ದಿನದ ಮೆರಣಿವಗೆಯಲ್ಲಿ ಮಹಿಳಾ ಸಮಿತಿಯವರು ಹೊಸ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ಪುಸ್ತಕಗಳನ್ನು ಹಿಡಿದು ಸಮ್ಮೇಳನ ನಡೆಯುವ ಸ್ಥಳದವರೆಗೂ ಸಾಗಿರುವುದು ವಿಶೇಷವಾಗಿತ್ತು ಎಂದು ಸ್ಮರಿಸಿದರು.

ಇನ್ನು ಮುಂದೆ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕ ಮೆರವಣಿಗೆ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬಹುದಾದ ದಿಕ್ಸೂಚಿಯನ್ನು ನೀಡಿದ್ದಾರೆ. ಇಂದು ಬಹಳಷ್ಟು ಮಹಿಳೆಯರು ಮಹಿಳಾ ಭವನ ನಿರ್ಮಾಣಕ್ಕೆ ಆಶಯವ್ಯಕ್ತಪಡಿಸಿದ್ದಾರೆ. ನಾನೂ ಕೂಡ ಕೈ ಜೋಡಿಸಿ ಮಹಿಳಾ ಭವನ ನಿರ್ಮಾಣಕ್ಕೆ ಎಲ್ಲದೊಂದಿಗೆ ಶ್ರಮಿಸಬೇಕು. ಸಮ್ಮೇಳನಕ್ಕೆ ಬಂದ ಹೊರ ಜಿಲ್ಲೆಯ ಅತಿಥಿಗಳನ್ನು ಮಹಿಳಾ ಸಮಿತಿಯವರು ಮನೆಗಳಲ್ಲಿ ಆತಿಥ್ಯ ನೀಡಿದ್ದಾರೆ. ಅವರಿಗೆಲ್ಲ ಧನ್ಯವಾದ ಹೇಳುತ್ತೇನೆ. ಸಮ್ಮೇಳನ ಯಶಸ್ಸಿಗಾಗಿ ಶ್ರಮಿಸಿದ ಎಲ್ಲರಿಗೂ ಒಳಿತಾಗಲಿ ಎಂದು ನುಡಿದರು.

ಮಹಿಳಾ ಸಮಿತಿ ಅಧ್ಯಕ್ಷೆ ಸುನಂದಾ ಜಯರಾಂ ಮಾತನಾಡಿ, ಸಮ್ಮೇಳನದಲ್ಲಿ ಮಹಿಳಾ ಸಮಿತಿಗೆ ವಹಿಸಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಸಮರ್ಥವಾಗಿ ನಿಭಾಯಿಸಿದ್ದೇವೆ. ಸಮಿತಿ ಮತ್ತು ಸಮನ್ವಯ ಸಮಿತಿ ಮೂಲಕ ಎಲ್ಲ ಹೊಣೆಯನ್ನು ವಿಕೇಂದ್ರಿಕರಣಗೊಳಿಸಿ, ಸಮ್ಮೇಳನದಲ್ಲಿ ಮಹಿಳಾ ಸಮಿತಿ ಒಂದು ಹೆಗ್ಗುರುತನ್ನು ಮೂಡಿದ್ದೇವೆ. ದೇಶದಲ್ಲಿ ಪ್ರಪ್ರಥಮ ಬಾರಿಗೆ ವೈಚಾರಿಕತೆಯ ಹೆಜ್ಜೆಯನ್ನು ಮಂಡ್ಯ ಸಮ್ಮೇಳನದಲ್ಲಿ ಚಾಪು ಮೂಡಿಸಿದ್ದೇವೆ. ಸಾಹಿತ್ಯಕ್ಕಾಗಿ ಪುಸ್ತಕ, ನುಡಿಗಾಗಿ ಭಾವುಟ ಎನ್ನುವ ಘೋಷವಾಕ್ಯದೊಂದಿಗೆ ಮೆರವಣಿಗೆ ಮೂಲಕ ಒಂದು ಇತಿಹಾಸ ಸೃಷ್ಠಿಸಿದ್ದೇವೆ ಎಂದರು.

ಮಹಿಳಾ ಸಮಿತಿ ಉಪಾಧ್ಯಕ್ಷೆ ಸೌಭಾಗ್ಯ ಮಹದೇವು, ಸದಸ್ಯ ಕಾರ್ಯದರ್ಶಿ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಬಿ.ಎಸ್.ಸೀತಾಲಕ್ಷ್ಮೀ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಸಂಚಾಲಕರಾದ ಡಾ.ವೀಣಾ, ಜೆ.ಸುಜಾತಾಕೃಷ್ಣ, ಸಮನ್ವಯ ಸಮಿತಿಯ ಪ್ರೊ.ಶ್ರೀಲತಾ, ಅನುಸೂಯಾ ಹೊಂಬಾಳೆ, ಉಷಾರಾಣಿ, ಸಿ.ಕುಮಾರಿ, ಅರುಣಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net