

ರಾಜು ಹೊಸಮನಿ ನರಗುಂದ
ತಾಲೂಕಿನ ಮದಗುಣಕಿ ಗ್ರಾಮದ ಶ್ರೀ ಅಜ್ಜೇಶ್ವರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಲಿದೆ. ಶ್ರೀಗಳ ಸ್ಮರಣೋತ್ಸವ ಅಂಗವಾಗಿ ಶುಕ್ರವಾರ ಬೆಳಗ್ಗೆ ಕರ್ತೃ ಗದ್ದುಗೆಗೆ ಮಹಾಪೂಜೆ, ಸಕಲ ವಾದ್ಯ-ವೈಭವಗಳೊಂದಿಗೆ ಪೂಜ್ಯರ ಭಾವಚಿತ್ರ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ.
ಪುಣ್ಯಸ್ಮರಣೋತ್ಸವ ನಿಮಿತ್ತ ಸೆ. 7ರಿಂದ ಸೆ.12ರ ವರೆಗೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶ್ರೀಶಾಂತಲಿಂಗ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ, ಗುರುಸಿದ್ದಯ್ಯ ಹಿರೇಮಠ, ಗಂಗಯ್ಯ ಹಿರೇಮಠ ಅವರ ಸಮ್ಮುಖತ್ವದಲ್ಲಿ ಬೆಳಗಾವಿ ಕಾರಂಜಿಮಠದ ಉತ್ತರಾಧಿಕಾರಿ ಡಾ. ಶಿವಯೋಗಿ ದೇವರು ಅವರಿಂದ ಮಹಾತ್ಮರ ಜೀವನ ದರ್ಶನ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಅಜ್ಜೇಶ್ವರರು ನಮ್ಮನ್ನಗಲಿ ಸೆ.12ಕ್ಕೆ 29 ವರ್ಷಗಳಾಗಿವೆ.
ಶ್ರೀಗಳ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಮಲಪ್ರಭೆ ನದಿ ದಡದಲ್ಲಿ ಜನಿಸಿ ಯೋಗ ಸಿದ್ಧಿಯಿಂದ 300 ವರ್ಷ ಬದುಕಿದ್ದ ಅಜ್ಜೇಶ್ವರರು ಯಾವುದೇ ಮತ-ಪಂಥಕ್ಕೆ ಸೀಮಿತವಾಗಿರದೆ ತಮ್ಮ ಜೀವಿತಾವಧಿಯವರೆಗೂ ಶಿಸ್ತು, ಸೌಜನ್ಯ ಮಾನವೀಯ ಮೌಲ್ಯ ಮೈಗೂಡಿಸಿಕೊಂಡಿದ್ದರು. ಸಕಲ ಜೀವರಾಶಿಗಳಿಗೆ ಲೇಸಾಗಲಿ ಎಂಬ ಶರಣರ ವಾಣಿಗೆ ಅನ್ವರ್ಥ ಎಂಬಂತೆ ಬದುಕಿದವರು. ಕಷ್ಟ-ಕಾರ್ಪಣ್ಯಗಳಿಂದ ಬಳಲಿ ಬಂದ ಭಕ್ತರ ಭಾವನೆಗಳನ್ನು ಕಳೆದು ಅವರ ಬಾಳು ಬೆಳಗಿದ ಭಗವತ್ ಸ್ವರೂಪರಾಗಿದ್ದರು. ಅವರು ಭಕ್ತರ ಹೃದಯಸಿಂಹಾಸನದಲ್ಲಿ ಇಂದಿಗೂ ನೆಲೆಸಿದ್ದಾರೆ. ಬದುಕಿರುವಾಗ ಒಂದು ದಿನವೂ ಪಲ್ಲಕ್ಕಿ ಏರಲಿಲ್ಲ, ಮೆರವಣಿಗೆ ಬಯಸಲಿಲ್ಲ, ಗಾದಿಗೊರಗಿ ಕೂರಲಿಲ್ಲ, ಮೃಷ್ಟಾನ್ನ ಉಣ್ಣಲಿಲ್ಲ, ಸಿಂಗಾರ ಬಯಸಲಿಲ್ಲ, ಬಂಗಾರ ಬೇಡಲಿಲ್ಲ, ಕೀರ್ತಿಶನಿಯ ಹಿಂದೆ ಹೋಗಲಿಲ್ಲ, ಸ್ವಾಮಿ ನಾನಲ್ಲ. ನನ್ನದಲ್ಲ- ನನ್ನಿಂದಲ್ಲ. ನೀವೆ ಎಲ್ಲ, ನಿಮ್ಮದೇ ಎಲ್ಲ, ನಿಮ್ಮಿಂದಲೇ ಎಲ್ಲ ಎಂಬ ವಿನೀತ ಭಾವದ ಪೂಜ್ಯರಾಗಿದ್ದರು. ಯಾರಾದರೂ ಬಂದು ಯಪ್ಪಾ ಎಲ್ಲವೂ ತಮ್ಮ ಆಶೀರ್ವಾದ ಎಂದರೆ ‘ನಂದು-ನಿಂದು ಏನಿದೆ? ಈ ಜಗದಲಿ. ಎಲ್ಲವೂ ಆ ಶಿವನಿಚ್ಛೆ’ ಎಂದು ಕೈಮುಗಿಯುತ್ತಿದ್ದರು ಅಜ್ಜೇಶ್ವರರು.