

ಬೆಳಗಾವಿ: ಏನೇ ಪ್ರಶ್ನೆ ಕೇಳಿದರೂ ಕ್ಷರ್ಣಾರ್ಧದಲ್ಲೇ ಉತ್ತರ ಹೇಳುವ ಕುಂದಾನಗರಿಯ ಬಾಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಕಿರೀಟ ಒಲಿದಿದೆ. ತೊದಲು ನುಡಿಯಲ್ಲೇ ಪುಟ್ಟ ಕಂದಮ್ಮ ತನಗಿರುವ ಅಗಾಧ ಜ್ಞಾನಪಕ ಶಕ್ತಿ ಪ್ರದರ್ಶಿಸಿ ದಾಖಲೆ ಮುಡಿಗೇರಿಸಿಕೊಂಡಿದ್ದು, ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
‘ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು’ ಎನ್ನುವ ಹಾಗೆ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಆಸಕ್ತಿ ಗಮನಿಸಿ ತರಬೇತಿ ನೀಡಿದರೆ ಅವರು ಏನೆಲ್ಲ ಸಾಧಿಸಲು ಸಾಧ್ಯ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾಳೆ ಇಲ್ಲಿನ ಭಾಗ್ಯನಗರದ ನಿವಾಸಿ, ಖಾಸಗಿ ಉದ್ಯೋಗಿ ಸಚಿನ್-ಮೇಘಾ ಕುಲಕರ್ಣಿ ದಂಪತಿಯ ಮೂರೂವರೆ ವರ್ಷದ ಮಗಳು ಚಿನ್ಮಯಿ. ಯಾವುದೋ ಸಂದರ್ಭದಲ್ಲಿ ಹೇಳಿದ್ದ ಮಾತು ನೆನಪಿಟ್ಟುಕೊಂಡು ಇನ್ನಾವುದೇ ಸನ್ನಿವೇಶದಲ್ಲಿ ಅದನ್ನು ಕೇಳುತ್ತಿದ್ದುದನ್ನು ತಂದೆ-ತಾಯಿ ಗಮನಿಸಿದ್ದರು. ಆ ನೆನಪಿನ ಶಕ್ತಿಗೆ ತರಬೇತಿ ಆರಂಭಿಸಿದ ಪಾಲಕರು, ದಿನವೂ ಪಾಠ ಹೇಳಿಕೊಡುವ ಮೂಲಕ ಇಂದು ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಲು ಸ್ಫೂರ್ತಿಯಾಗಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಚಿನ್ಮಯಿ ತನ್ನ ಪ್ರತಿಭೆ ಮೂಲಕ ದಾಖಲೆ ಬರೆದಿದ್ದಾಳೆ.
ನೆನಪು ಅಗಾಧ: 29 ರಾಜ್ಯ ಹಾಗೂ ರಾಜಧಾನಿಗಳು, 7 ರಾಷ್ಟ್ರಗಳ ರಾಷ್ಟ್ರೀಯ ಚಿನ್ಹೆ, ಐವರು ಐತಿಹಾಸಿಕ ವ್ಯಕ್ತಿಗಳ ಪಾತ್ರಾಭಿನಯ, 12 ಬಣ್ಣಗಳು, 1ರಿಂದ 20 ಅಂಕಿಗಳಿಂದ 32 ಮಾದರಿಗಳ ರಚನೆ, 20 ಆಕೃತಿಗಳು, 26 ಇಂಗ್ಲಿಷ್ ಅಕ್ಷರಗಳ ವಿವಿಧ ಚಿತ್ರ ಹಾಗೂ ಉಚ್ಛಾರಣೆ, ಪ್ರಾಣಿ, ಪಕ್ಷಿ, ಹಣ್ಣುಗಳು, ತರಕಾರಿಗಳು, ಸೌರ ಮಂಡಲದ ಗ್ರಹಗಳ ಹೆಸರು, ಗಣಿತ ಚಿನ್ಹೆಗಳು, ವಾರಗಳ ಹೆಸರು, ತಿಂಗಳುಗಳು, ಶರೀರದ ವಿಭಿನ್ನ ಭಾಗಗಳ ಹೆಸರುಗಳನ್ನು ನಿಖರವಾಗಿ ಹೇಳುತ್ತಾಳೆ. ಅಲ್ಲದೆ, 20 ಬಗೆಯ ವಾಹನಗಳನ್ನು ಗುರುತಿಸುವ ಸಾಮರ್ಥ್ಯ ಹಾಗೂ ದೇಶದ ಪ್ರಚಲಿತ ವಿದ್ಯಮಾನಗಳು ಸೇರಿ ವಯಸ್ಸಿಗೂ ಮೀರಿ ಜ್ಞಾಪಕ ಶಕ್ತಿ ಹೊಂದಿದ್ದಾಳೆ. ಇದೆಲ್ಲವನ್ನೂ ಗಮನಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಸಿಬ್ಬಂದಿ ಬಾಲಕಿಗೆ ಲಾಕ್‌ಡೌನ್ ಅವಧಿಯಲ್ಲೇ (ಮೇ 23ರಂದು) ಪಾರಿತೋಷಕ ಹಾಗೂ ಪ್ರಮಾಣಪತ್ರ ಕಳುಹಿಸಿಕೊಟ್ಟಿದ್ದಾರೆ.
ಮಗಳ ನೆನಪಿನ ಶಕ್ತಿ ಕಂಡು ಖುಷಿಯಾಗಿತ್ತು. ಅವಳ ಪ್ರತಿಭೆಯಿಂದಲೇ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲಿ ಎಂದು ಮನೆಯಲ್ಲಿ ತರಬೇತಿ ನೀಡಿದೆವು. ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾಳೆ. ಮುಂದೆ ಅವಳು ಇನ್ನೂ ಸಾಧನೆ ಮಾಡಿ ಉನ್ನತ ಹುದ್ದೆಯೇರಿ ಸಮಾಜಸೇವೆ ಮಾಡಲಿ ಎನ್ನುವುದೇ ನಮ್ಮ ಕನಸು. | ಸಚಿನ್-ಮೇಘಾ ಕುಲಕರ್ಣಿ, ಚಿನ್ಮಯಿ ಪಾಲಕರು