

ಮೈಸೂರು: ಪಿಎಂ ಗತಿ ಶಕ್ತಿ ಯೋಜನೆ ಅಡಿ ಮೈಸೂರು ಭಾಗದಲ್ಲಿ ಕೈಗೊಂಡಿರುವ ರೈಲ್ವೆ ಇಲಾಖೆಯ ಅಭಿವೃದ್ಧಿ ಕಾಮಗಾರಿ ಹಾಗೂ ಇತರ ಕಾಮಗಾರಿ ಸಂಬಂಧ ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳ ಸಭೆ ನಡೆಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮೈಸೂರು-ಕುಶಾಲನಗರ ರೈಲು ಯೋಜನೆ, ನಾಗನಹಳ್ಳಿ ಬಳಿ ರೈಲ್ವೆ ಟರ್ಮಿನಲ್ ನಿರ್ಮಾಣ, ಮೆಮೋ ರೈಲು ಸಂಚಾರ ಸೇರಿದಂತೆ ಇತರ ವಿಷಯದ ಬಗ್ಗೆ ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಾಗನಹಳ್ಳಿ ಬಳಿ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಬೇಕು ಎಂದು ಯೋಜನೆ ರೂಪಿಸಲಾಗಿತ್ತಾದರೂ ಭೂಮಿ ಸ್ವಾಧೀನ ಕಾರ್ಯ ಸಮಸ್ಯೆಯಾಗಿದ್ದರಿಂದ ರೈಲ್ವೆ ನಿಲ್ದಾಣದ ಬಳಿ ಇರುವ ಹಳೆಯ ವಸತಿಗೃಹಗಳನ್ನು ತೆರವುಗೊಳಿಸಿ ವಿಸ್ತರಿಸಲಾಗುತ್ತಿದೆ. ಅಲ್ಲದೆ ಮತ್ತೊಂದು ಪ್ರವೇಶ ದ್ವಾರಕ್ಕೂ ಅಂತಿಮ ಡಿಸೈನ್ ತಯಾರಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ನಗರದ ಅಶೋಕಪುರಂ ರೈಲು ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಮೆಮೋ ರೈಲುಗಳ ಸಂಚಾರ ಆರಂಭವಾಗಲಿದೆ. ದಸರಾ ಹೊತ್ತಿಗೆ ಉದ್ಘಾಟನೆಗೆ ಚಿಂತನೆ ನಡೆಸಲಾಗಿದ್ದು, ಕೇಂದ್ರ ಸಚಿವರನ್ನು ಆಹ್ವಾನಿಸಿ ಉದ್ಘಾಟಿಸಲು ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯ ರೈಲು ನಿಲ್ದಾಣದ ಬದಲು ಅಶೋಕಪುರಂ ನಿಲ್ದಾಣದಿಂದ ನಾಲ್ಕು ಮೆಮೋ ರೈಲುಗಳ ಸಂಚಾರ ಆರಂಭಗೊಂಡರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.