

ನರಗುಂದ: ಬಿಜೆಪಿ ಸದಸ್ಯತ್ವ ಅಭಿಯಾನ ಸೆ. 2ರಂದು ಶುರುವಾಗಲಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಕ್ಷದ ಸದಸ್ಯತ್ವ ಮರು ನವೀಕರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನರಗುಂದ ಮಂಡಲದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸದಸ್ಯತ್ವ ಅಭಿಯಾನದ ನೇತೃತ್ವವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ ತಾಬ್ಡೆ ವಹಿಸಿಕೊಂಡಿದ್ದು, ಈ ಬಾರಿ 10 ಕೋಟಿ ಹೊಸ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಸೆ. 2ರಿಂದ 25ರ ವರೆಗೆ ಮೊದಲನೇ ಹಂತ, ಅ. 1ರಂದು 2ನೇ ಹಂತದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ಮಂಡಲದ ಪ್ರತಿ ಬೂತ್ಗಳಲ್ಲಿ ಕನಿಷ್ಠ 300 ಹೊಸ ಸದಸ್ಯರನ್ನು ಸೇರ್ಪಡೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ನರಗುಂದ ಮಂಡಲದ ಅಧ್ಯಕ್ಷ ಅಜ್ಜುಗೌಡ ಪಾಟೀಲ ಬಿಜೆಪಿ ತತ್ವ ಸಿದ್ಧಾಂತಗಳ ಕುರಿತು ಮಾತನಾಡಿದರು. ನರಗುಂದ ಮಂಡಲದ ಬಿಜೆಪಿ ಪ್ರ. ಕಾರ್ಯದರ್ಶಿ ಕಿರಣ ಮುಧೋಳೆ, ಎಸ್.ಬಿ. ಕರಿಗೌಡ್ರ, ಬಿ.ಬಿ. ಐನಾಪೂರ, ಎನ್.ಕೆ. ಸೋಮಾಪೂರ, ಎಸ್.ಆರ್. ಪಾಟೀಲ, ಸಂಗನಗೌಡ ಹಾಲಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಸಂತೋಷ ಹಂಚಿನಾಳ, ಪಕ್ಷದ ಎಲ್ಲ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಗ್ರಾಪಂ, ಪುರಸಭೆ ಸದಸ್ಯರು, ಮಹಾ ಶಕ್ತಿಕೇಂದ್ರ ಹಾಗೂ ಶಕ್ತಿ ಕೇಂದ್ರದ ಸದಸ್ಯರು, ಮಂಡಲದ ಬೂತ್ ಮಟ್ಟದ ಅಧ್ಯಕ್ಷರು ಭಾಗಿಯಾಗಿದ್ದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಠ್ಠಲ ಹವಾಲ್ದಾರ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಘಟಕದ ಅಧ್ಯಕ್ಷ ಗೌಸ್ ತಾಲೀಮನವರ ಕಾರ್ಯಕ್ರಮ ನಿರ್ವಹಿಸಿದರು.