

ಮಂಡ್ಯ: ಕಳೆದ 45 ವರ್ಷದಿಂದ ರೈತ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಿಸಾನ್ ಸಂಘಕ್ಕೆ ಫೆ.1ರಿಂದ 10ರವರೆಗೆ ಸದಸ್ಯತ್ವ ನೋಂದಣಿ ಆಯೋಜಿಸಲಾಗಿದೆ ಎಂದು ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು ತಿಳಿಸಿದರು.
ಪ್ರತಿ ರೈತರೂ ನಮ್ಮ ನಾಯಕ ಎಂಬ ಘೋಷಣೆಯಂತೆ ನಡೆದುಕೊಳ್ಳುವುದರ ಜತೆಗೆ ರೈತರಿಂದ, ರೈತರಿಗಾಗಿ, ರೈತರಿಗೊಸ್ಕರ ರಚನಾತ್ಮಕ ಚಟುವಟಿಕೆ ಮಾಡಲಾಗುತ್ತಿದೆ. ದೇಶದ ಎಲ್ಲ ರಾಜ್ಯ, ಜಿಲ್ಲೆಗಳಲ್ಲಿಯೂ ಸಮಿತಿ ರಚನೆ ಮಾಡಲಾಗಿದೆ. ಅದರಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾವಯವ ಕೃಷಿ, ಗೋಸಂರಕ್ಷಣೆ, ಜಲ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ, ಸಮಾಜಕ್ಕೆ ವಿಷಮುಕ್ತ ಆಹಾರ ಒದಗಿಸುತ್ತಾ ರೈತರನ್ನು ಸ್ವಾವಲಂಭಿಯನ್ನಾಗಿ ಮಾಡಲಾಗುತ್ತಿದೆ. ರೈತರಿಗೆ ದೊರೆಯಬೇಕಾದ ಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡಲಾಗುತ್ತಿದೆ. ಕಳೆದ ಬಾರಿ ದಕ್ಷಿಣ ಪ್ರಾಂತ್ಯದಿಂದ 60 ಸಾವಿರ ಹಾಗೂ ಉತ್ತರ ಪ್ರಾಂತ್ಯದಿಂದ 1 ಲಕ್ಷ ಸದಸ್ಯತ್ವ ಮಾಡಲಾಗಿತ್ತು. 2023ಕ್ಕೆ 60 ಲಕ್ಷ ಸದಸ್ಯರಿದ್ದರು. ಈ ವರ್ಷ ಐದು ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದೆ. ಅಂತೆಯೇ 50 ಸಾವಿರ ಇದ್ದಂತಹ ಗ್ರಾಮ ಸಮಿತಿಯನ್ನು 1 ಲಕ್ಷಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಪ್ರಮುಖವಾಗಿ ಪ್ರತಿ ಗ್ರಾಮದಲ್ಲಿ ಕನಿಷ್ಟ 50 ಸಾವಿರ ಸದಸ್ಯರನ್ನು ಆಯ್ಕೆ ಮಾಡಿ 7 ಜನರನ್ನೊಳಗೊಂಡ ಸಮಿತಿ ರಚನೆ ಮಾಡಲಾಗುವುದು. ಅದರಂತೆ ಜಿಲ್ಲೆಯಲ್ಲಿ 50 ಸಾವಿರ ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಮಹಿಳಾ ಪ್ರಮುಖ್ ಪುಟ್ಟಮ್ಮ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದುರ್ಗೇಶ್, ಮಂಡ್ಯ ತಾಲೂಕು ಅಧ್ಯಕ್ಷ ಬಿ.ಪಿ.ಅಪ್ಪಾಜಿ, ನಗರ ಘಟಕದ ಅಧ್ಯಕ್ಷ ಅನಿಲ್‌ಕುಮಾರ್ ಇದ್ದರು.