

ಸಿದ್ದಾಪುರ: ಪಟ್ಟಣದ ರಾಘವೇಂದ್ರಮಠದ ಸಭಾಂಗಣದಲ್ಲಿ ತಾಲೂಕು ಬಿಜೆಪಿ ಮಂಡಲ ಸದಸ್ಯತ್ವ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಸರ್ಕಾರದ ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಬಳ್ಳಾರಿವರೆಗೆ ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಕೈಗೊಂಡಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನೇರವಾಗಿ ತೊಡಗಿದ್ದು ಮೇಲ್ನೋಟಕ್ಕೆ ಕಾಣುತ್ತದೆ. ಇಂತಹ ಕೆಟ್ಟ ಜನ ನಾಯಕರನ್ನು ದೂರ ಮಾಡಬೇಕಾದರೆ ಬಿಜೆಪಿ ಸಂಘಟನೆ ಅತ್ಯವಶ್ಯ. ತಳಮಟ್ಟದಿಂದ ಸಂಘಟಿತರಾಗಬೇಕಾದರೆ ಸದಸ್ಯತ್ವ ಅಭಿಯಾನ ಯಶಸ್ವಿಯಾಗಬೇಕು ಎಂದರು.
ರಾಜ್ಯ ಶಿಕ್ಷಣ ಪ್ರಕೋಷ್ಟದ ಸಹ ಸಂಚಾಲಕ ರವಿ ಹೆಗಡೆ ಹೂವಿನಮನೆ ಮಾತನಾಡಿ, ಭಾರತೀಯ ಜನತಾ ಪಾರ್ಟಿ ದೇಶ ಹಾಗೂ ಜಗತ್ತಿನಲ್ಲಿ ಅತಿ ದೊಡ್ಡ ಸದಸ್ಯರನ್ನು ಹೊಂದಿದ ಪಕ್ಷ. ಮೋದಿಯಂತಹ ಜನನಾಯಕರನ್ನು ಉಳಿಸಿಕೊಂಡು ಹೋಗಬೇಕಾದರೆ ಹೆಚ್ಚಿನ ಸದಸ್ಯರನ್ನು ಸೇರ್ಪಡೆ ಮಾಡಬೇಕು. ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆ ಸಮಯದಲ್ಲಿ ನಮಗೆ ಬಹಳ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಹೆಗಡೆ ಸದಸ್ಯತ್ವ ಅಭಿಯಾನ ಕುರಿತು ಕಾರ್ಯಕರ್ತರಿಗೆ ಮಾಹಿತಿ ನೀಡಿದರು.
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಅಧ್ಯಕ್ಷತೆವಹಿಸಿದ್ದರು. ನಿಕಟಪೂರ್ವ ಮಂಡಲ ಅಧ್ಯಕ್ಷ ಮಾರುತಿ. ಟಿ.ನಾಯ್ಕ, ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಜಿಲ್ಲಾ ಸಮಿತಿ ಆಹ್ವಾನಿತರಾದ ಗುರುರಾಜ ಶಾನಭಾಗ, ಜಿಲ್ಲಾ ಎಸ್ಸಿ ಮೊರ್ಚ ಅಧ್ಯಕ್ಷ ನಂದನ ಬೋರಕರ್ ಉಪಸ್ಥಿತರಿದ್ದರು
ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಕೆ.ಮೇಸ್ತ ಹಾಗೂ ತೋಟಪ್ಪ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.