ವಿಕಸಿತ ಭಾರತಕ್ಕೆ ಸದಸ್ಯತ್ವ ಅಭಿಯಾನ ಅಡಿಪಾಯ: ಸಂಸದ ಯದುವೀರ್

mysore
Published on

ಮೈಸೂರು: ರಾಜ್ಯದ ಎಲ್ಲ ಕಡೆಯೂ ಈಗಾಗಲೇ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆಯ ನಿಟ್ಟಿನಲ್ಲಿ ನಮ್ಮ ಸದಸ್ಯತ್ವ ಅಭಿಯಾನವೂ ಅಡಿಪಾಯವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.


ಬಿಜೆಪಿ ಜಿಲ್ಲಾ ಗ್ರಾಮಾಂತರ ವತಿಯಿಂದ ನಗರದ ಪಕ್ಷದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸದಸ್ಯತ್ವ ಅಭಿಯಾನದಿಂದ ಪಕ್ಷ ಬಲವರ್ಧನೆಯಾದರೆ ಅದರಿಂದ ಸೂಕ್ತ ನಾಯಕ ನಮ್ಮ ದೇಶವನ್ನು ಮುನ್ನಡೆಸಲು ಅವಕಾಶವಾಗುತ್ತದೆ. ಇದರಿಂದ ವಿಕಸಿತ ಭಾರತಕ್ಕೆ ’ಅಮೃತ ಕಾಲ’ ಈಗ ಬಂದಿದೆ ಎಂದರು.


ಇದು ಭಾರತದ ಇತಿಹಾಸದಲ್ಲಿ ಒಂದು ದೊಡ್ಡ ಮುನ್ನುಡಿ ತೆಗೆದುಕೊಳ್ಳಲಿರುವ ಅವಧಿಯಾಗಿದೆ. ಒಂದು ನಿರ್ದಿಷ್ಟ ಸಮಯದಲ್ಲಿ ಭಾರತದ ಅಭಿವೃದ್ಧಿ ವೇಗ ಇಷ್ಟು ದೊಡ್ಡದಾಗಿ ನಡೆಯುತ್ತದೆ ಎಂದರೆ, ವಿಕಸಿತ ಭಾರತದ ದೊಡ್ಡ ಕನಸು ನನಸಾದರೆ ನಮ್ಮ ಭಾರತ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.


ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯವು ಮೋದಿ ಅವರ ನಾಯಕತ್ವ ಮತ್ತು ದೇಶದ ದೃಷ್ಟಿಯಲ್ಲಿ ನಿರಂತರ ಅಭಿವೃದ್ಧಿ ಕೆಲಸಗಳು ಹಾಗೂ ಜನತೆಗೆ ಅವರ ಮೇಲಿರುವ ನಂಬಿಕೆಯನ್ನು ತೋರಿಸುತ್ತಿದೆ. ಅವರ ಪ್ರಚಾರವು ಆರ್ಥಿಕ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಕೇಂದ್ರೀಕೃತವಾಗಿತ್ತು. ಇದು ಜನಸಂಖ್ಯೆಯೊಂದಿಗೆ ವ್ಯಾಪಕವಾಗಿ ಪ್ರತಿಧ್ವನಿಸಿತು. ಮೋದಿ ಅವರ 3ನೇ ಅವಧಿಯು ಅವರ ಹಿಂದಿನ ಅಧಿಕಾರಾವಧಿಯಲ್ಲಿ ಹಾಕಿದ ಜನಪರ ಯೋಜನೆಗಳ ಅಡಿಪಾಯದ ಮೇಲೆ ನಿರ್ಮಾಣವಾಗಿದೆ ಎಂದರು.


ತಾಂತ್ರಿಕ ನಾವೀನ್ಯತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಗೆ ಒತ್ತು ನೀಡಿದ್ದು, ಭಾರತವನ್ನು ಜಾಗತಿಕ ಶಕ್ತಿ ಕೇಂದ್ರವಾಗಿ ಮತ್ತಷ್ಟು ಮೇಲೆತ್ತುವ ಅಂಶವಾಗಿದೆ. ಕೇಂದ್ರ ಸರ್ಕಾರವು ಯೋಜನೆಗಳು ಬಡವರ ಹಾಗೂ ಮಧ್ಯಮ ವರ್ಗದ ಪರ ಇದೆ. ದೇಶಾಭಿವೃದ್ಧಿಯಾಗಲು ನಾವೆಲ್ಲರೂ ಪಕ್ಷ ಕಟ್ಟುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಲ್ಲಿ ಸದಸ್ಯತ್ವವನ್ನು ಹೆಚ್ಚು ಮಾಡಬೇಕು ಎಂದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತನಾಡಿ, ರಾಜ್ಯದೆಲ್ಲೆಡೆ ಸದಸ್ಯತ್ವ ಅಭಿಯಾನವು ಚುರುಕಾಗಿ ನಡೆಯುತ್ತಿದ್ದು, ಪ್ರತಿ ಜಿಲ್ಲೆಯ ಅಧ್ಯಕ್ಷರು, ತಾಲೂಕು ಅಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಈಗಾಗಲೇ ಸದಸ್ಯತ್ವ ನೋಂದಣಿ ಕುರಿತು ಸಾಕಷ್ಟು ಮನದಟ್ಟು ಮಾಡಿದ್ದು, ಅವರ ನೇತೃತ್ವದಲ್ಲಿ ನಾವೆಲ್ಲರೂ ಗ್ರಾಮೀಣ ಭಾಗಗಳಲ್ಲಿ ಮೊ.88000-02024ಗೆ ಮಿಸ್ಡ್ ಕಾಲ್ ಕೊಡಿಸುವ ಮೂಲಕ ಸದಸ್ಯತ್ವ ಮಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ತಾಲೂಕು ಅಧ್ಯಕ್ಷರಿಗೆ ಸದಸ್ಯತ್ವ ಅರ್ಜಿ, ಸಕ್ರಿಯ ಸದಸ್ಯರ ಅರ್ಜಿವಿತರಿಸಿದರು. ಮುಖಂಡರಾದ ಪಣೀಶ್, ಮಂಗಳಾ ಸೋಮಶೇಖರ್, ಹರ್ಷವರ್ಧನ್ ಮಾತನಾಡಿದರು. ಮುಖಂಡರಾದ ಎಸ್.ಮಹದೇವಯ್ಯ, ಮಿರ್ಲೆ ಶ್ರೀನಿವಾಸ್ ಗೌಡ, ದೇವರನಹಳ್ಳಿ ಸೋಮಶೇಖರ್, ಹೊಸಳ್ಳಿ ವೆಂಕಟೇಶ್, ಮಡವಾಡಿ ಮಹೇಶ್, ಬಾಲಕೃಷ್ಣ, ಕಿರಣ್ ಜಯರಾಮೇಗೌಡ, ಪಾಪಣ್ಣ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net