ಅವಿಶ್ವಾಸ ನಿಲುವಳಿ ಮಂಡಿಸಿದ ಸದಸ್ಯರು

Oplus_0
ಹಿರೀಸಾವೆ ಹೋಬಳಿ ಬೆಳಗೀಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅವಿಶ್ವಾಸ ಮಂಡನೆಗೊಳಿಸಿದ ಸದಸ್ಯರು.
Published on

ಹಿರೀಸಾವೆ: ಹೋಬಳಿಯ ಬೆಳಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ 8 ಸದಸ್ಯರು ಗುರುವಾರ ಅವಿಶ್ವಾಸ ನಿಲುವಳಿ ಮಂಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಕುಮಾರಿ ಅವರು ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಇತರ ಕೆಲಸಗಳಿಗೆ ಸ್ವಂದಿಸದ ಕಾರಣ ಎಲ್ಲ ಸದಸ್ಯರು ಸೇರಿ ಒಂದು ತಿಂಗಳ ಹಿಂದೆಯೇ ಹಾಸನ ಉಪವಿಭಾಗಾಧಿಕಾರಿಗೆ ಅವಿಶ್ವಾಸ ಮಂಡನೆಗೆ ಮನವಿ ಸಲ್ಲಿಸಿದ್ದರು.

ಅದರಂತೆಯೇ ಗುರುವಾರ ಅವಿಶ್ವಾಸ ನಿಲುವಳಿ ಮಂಡಿಸಲು ಸಭೆ ನಿಗದಿಪಡಿಸಲಾಗಿತ್ತು. ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಅವಿಶ್ವಾಸ ಮಂಡನೆಯ ಸಭೆ ನಡೆಯಿತು.

ಜೆಡಿಎಸ್ ಬೆಂಬಲಿತ 8 ಹಾಗೂ ಕಾಂಗ್ರೆಸ್ ಬೆಂಬಲಿತ 4 ಮಂದಿ ಸೇರಿದಂತೆ ಗ್ರಾಮ ಪಂಚಾಯಿತಿಯು 12 ಸದಸ್ಯ ಬಲ ಹೊಂದಿದೆ. ಆದರೆ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡ ಉಪಾಧ್ಯಕ್ಷೆ ಆಶಾ ಸೇರಿದಂತೆ ಜೆಡಿಎಸ್ ಬೆಂಬಲಿತ 4 ಹಾಗೂ ಕಾಂಗ್ರೆಸ್ ಬೆಂಬಲಿತ 4 ಒಟ್ಟು 8 ಸದಸ್ಯರು ಈ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿದ್ದರು.

ಅಧ್ಯಕ್ಷರ ಅಧಿಕಾರ ಹಂಚಿಕೆಯ ಒಪ್ಪಂದ ಆಗಿತ್ತು. ಅದರಂತೆ ಜೆಡಿಎಸ್ ಮುಖಂಡರ ಸೂಚನೆ ಮೇರೆಗೆ ಹಾಲಿ ಅಧ್ಯಕ್ಷೆ ಪ್ರೇಮಕುಮಾರಿ ರಾಜೀನಾಮೆ ನೀಡಿ ನಂತರ ಮತ್ತೆ ಹಿಂಪಡೆದದ್ದು ಜೆಡಿಎಸ್ ಬೆಂಬಲಿತ ಸದಸ್ಯರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಒಂದು ವಾರದಿಂದ 8 ಮಂದಿ ಸದಸ್ಯರು ಪ್ರವಾಸದಲ್ಲಿದ್ದರು.

ಗುರುವಾರ ಬೆಳಗ್ಗೆ 10.15ರ ವೇಳೆಗೆ 8 ಮಂದಿ ಸದಸ್ಯರು ಸಭೆಗೆ ಹಾಜರಾಗಿದ್ದು, ಅಧ್ಯಕ್ಷರ ವಿರುದ್ಧ ಕೋರಂನೊಂದಿಗೆ ಅವಿಶ್ವಾಸ ಮಂಡಿಸಿದರು. ಅಧ್ಯಕ್ಷೆ ಪ್ರೇಮಕುಮಾರಿ ಹಾಗೂ ಉಳಿದ ಮೂವರು ಸದಸ್ಯರು ಗೈರಾಗಿದ್ದರು. ಉಳಿದ ಅವಧಿಗೆ ನೂತನ ಅಧ್ಯಕ್ಷರ ಆಯ್ಕೆಗೆ ಅಧಿಕಾರಿಗಳು ಚುನಾವಣೆ ನಡೆಸಲು ಸಮಯ ನಿಗದಿಪಡಿಸಬೇಕಿದೆ.

ಉಪವಿಭಾಗಾಧಿಕಾರಿ ಮಾರುತಿ, ಗ್ರಾಪಂ ಉಪಾಧ್ಯಕ್ಷೆ ಆಶಾ, ಸದಸ್ಯರಾದ ಎಚ್.ಪಿ.ಕೃಷ್ಣೇಗೌಡ, ಶಂಕರೇಗೌಡ, ಕುಮಾರ್, ಪುನೀತ್, ವನಿತಾ, ರತ್ನಮ್ಮ, ಶ್ವೇತಾ, ಪಿಡಿಒ ಮೊಹಮದ್ ಇಬ್ರಾಹಿಂ, ಕಾರ್ಯದರ್ಶಿ ರಾಘವೇಂದ್ರ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net