ಎಸಿ ಕಾವ್ಯಾರಾಣಿ ವಿರುದ್ಧ ಮುಗಿಬಿದ್ದ ಸದಸ್ಯರು

15sirsi1
Published on

ಶಿರಸಿ: ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಶಿರಸಿಗೆ ಬಂದ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮತ್ತು ಸದಸ್ಯರಿಗೆ ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಅವಮಾನ ಮಾಡಿದ್ದಾರೆ ಎಂಬ ವಿಷಯ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಯಿತು.

ಉಪವಿಭಾಗಾಧಿಕಾರಿಯಿಂದ ಲೋಪವಾಗಿದ್ದು, ಈ ಬಗ್ಗೆ ಸಂಸದರು, ಶಾಸಕರ ಗಮನಕ್ಕೆ ತರಬೇಕು, ಉಪ ವಿಭಾಗಾಧಿಕಾರಿ ಲಿಖಿತ ರೂಪದಲ್ಲಿ ನಗರಸಭೆಗೆ ಉತ್ತರಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ನಗರಸಭೆ ಅಧ್ಯಕ್ಷರು ನಗರದ ಪ್ರಥಮ ಪ್ರಜೆಯಾಗಿದ್ದು, ಉಪರಾಷ್ಟ್ರಪತಿಯ ಸ್ವಾಗತವನ್ನು ಅವರೇ ಮಾಡಬೇಕಿತ್ತು. ಆದರೆ, ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡದೇ ನಗರಸಭೆಗೆ ಅವಮಾನ ಮಾಡಿದೆ ಎಂದು ಸದಸ್ಯ ಶ್ರೀಕಾಂತ ತಾರಿಬಾಗಿಲು ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ ಅವರಿಗೆ ಕೆಲ ದಿನಗಳ ಹಿಂದೆ ಪತ್ರ ಬರೆದಿದ್ದರು. ಈ ವಿಷಯ ಸಭೆಯಲ್ಲಿ ಪ್ರಸ್ತಾಪವಾಯಿತು. ಇದಕ್ಕೆ ಸ್ಪಷ್ಟನೆ ನೀಡಿದ ಶರ್ವಿುಳಾ ಮಾದನಗೇರಿ, ಉಪ ರಾಷ್ಟ್ರಪತಿ ಅವರನ್ನು ಸ್ವಾಗತಿಸಿಕೊಳ್ಳಲು ಉಪವಿಭಾಗಾಧಿಕಾರಿ ನನಗೆ ಹಾಗೂ ವಾಹನಕ್ಕೆ ಪಾಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಗತ ಕಾರ್ಯಕ್ರಮಕ್ಕೆ ನಗರಸಭೆ ಸಹ ಸಿದ್ಧತೆ ನಡೆಸಿತ್ತು. ಆದರೆ, ಮಾರನೇ ದಿನ ಉಪ ವಿಭಾಗಾಧಿಕಾರಿ ನನಗೆ ಕರೆ ಮಾಡಿ, ನಿಮಗೆ ಪಾಸ್ ಮತ್ತು ಆಮಂತ್ರಣವನ್ನು ತಪ್ಪಾಗಿ ನೀಡಲಾಗಿದೆ. ನೀವು ಬಂದರೆ ಆಭಾಸವಾಗುತ್ತದೆ ಎಂದಿದ್ದಾರೆ. ನಾವಾಗಿಯೇ ಎಲ್ಲೂ ನಮಗೆ ಪಾಸ್ ನೀಡಿ ಎಂದು ಕೇಳಿರಲಿಲ್ಲ. ನಗರಸಭೆಗೆ ನೀಡಲಾಗಿದ್ದ ಜವಾಬ್ದಾರಿಯನ್ನು ನಾವು ಚಾಚೂ ತಪ್ಪದೇ ಮಾಡಿದ್ದೇವೆ. ಉಪ ರಾಷ್ಟ್ರಪತಿಗಳ ಕಾರು ಸಂಚರಿಸುವ ಜಾಗದಲ್ಲಿ ನಾಯಿ, ಆಕಳೂ ಸಹ ಬರದಂತೆ ನಾವು ವ್ಯವಸ್ಥೆ ಮಾಡಿದ್ದೇವೆ. ಉಪ ವಿಭಾಗಾಧಿಕಾರಿ ಈ ರೀತಿ ಅಗೌರವ ತೋರಿದ್ದಲ್ಲದೇ ಕಾರ್ಯಕ್ರಮದ ಬಳಿಕ ಧನ್ಯವಾದ ಸಲ್ಲಿಸುವ ಕನಿಷ್ಠ ಕಾರ್ಯವನ್ನೂ ಸಹ ಮಾಡಿಲ್ಲ. ಶಿರಸಿ ನಗರಸಭೆಗೆ ಹಾಗೂ ಶಿರಸಿ ಜನತೆಗೆ ನೀಡಬೇಕಿದ್ದ ಗೌರವವನ್ನು ಉಪವಿಭಾಗಾಧಿಕಾರಿ ನೀಡಿಲ್ಲ ಎಂದು ಆರೋಪಿಸಿದರು.

ಸದಸ್ಯ ಪ್ರದೀಪ ಶೆಟ್ಟಿ ಮಾತನಾಡಿ, ಅಧಿಕಾರಿಗಳಿಂದ ನಗರಸಭೆಯ ನಿರ್ಲಕ್ಷ್ಯ ಇದೇ ಮೊದಲಲ್ಲ. ಈ ಹಿಂದೆ ಕದಂಬೋತ್ಸವದಲ್ಲಿ ಸಹ ನಾವು ಎಲ್ಲ ರೀತಿಯ ಸಹಕಾರ ನೀಡಿದರೂ ಆಮಂತ್ರಣ ಪತ್ರಿಕೆಯಲ್ಲಿ ನಗರಸಭೆಯ ಹೆಸರು ಕಾಣಿಸಿರಲಿಲ್ಲ. ನೂತನ ಬಸ್ ನಿಲ್ದಾಣ ಉದ್ಘಾಟನೆಯ ವೇಳೆಯೂ ನಗರಸಭೆಯನ್ನು ನಿರ್ಲಕ್ಷ್ಯಿಸಲಾಗಿದೆ ಎಂದು ಆರೋಪಿಸಿದರು.

ಸದಸ್ಯ ಆನಂದ ಸಾಲೇರ ಮಾತನಾಡಿ, ಪ್ರತಿ ವರ್ಷ ಕದಂಬೋತ್ಸವಕ್ಕೆ ಶಿರಸಿ ನಗರಸಭೆಯೇ ಕೈ ಜೋಡಿಸುತ್ತದೆ. ಈಗ ಉಪ ರಾಷ್ಟ್ರಪತಿಗಳ ಕಾರ್ಯಕ್ರಮಕ್ಕೂ ಹೀಗೇ ಆಗಿದೆ. ಮಳೆಗಾಲದ ದಿನಗಳು ಸಮೀಪಿಸುತ್ತಿದ್ದು, ನಗರದಲ್ಲಿ ಸ್ವಚ್ಛತಾ ಕಾರ್ಯ ಬಾಕಿ ಇವೆ. ಆದಾಗ್ಯೂ ನಾವು ಸಹಕಾರ ನೀಡಿದರೆ ನಮ್ಮನ್ನು ನಿರ್ಲಕ್ಷ್ಯಿಸಲಾಗಿದೆ ಎಂದು ಆರೋಪಿಸಿದರು. ಉಪ ವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಇಡೀ ಶಿರಸಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಅವರ ವರ್ತನೆ ಬಗ್ಗೆ ನಗರಸಭೆಯಿಂದ ಖಂಡನಾ ನಿರ್ಣಯ ಸ್ವೀಕರಿಸಲಾಯಿತು.

ನಗರದ ಐದು ರಸ್ತೆ ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿಡಲು ಕೆಲ ಸಂಘಟನೆಗಳು ಒತ್ತಾಯಿಸುತ್ತಿರುವ ಬಗ್ಗೆ ನಗರಸಭೆಯಲ್ಲಿ ರ್ಚಚಿಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಸಂಧಿಸುವ ಜಾಗ ಐದು ರಸ್ತೆ ಆಗಿದೆ. ಇಲ್ಲಿ ವಾಹನ ದಟ್ಟಣೆ ಇರುವುದರಿಂದ ಇಲ್ಲಿಯ ವೃತ್ತಕ್ಕೆ ವಾಹನಗಳು ತಾಗಿ ಹಾನಿಯಾಗುತ್ತಿದೆ. ಈ ಸಮಸ್ಯೆ ಇನ್ನಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ಯಾವುದೇ ವೃತ್ತದ ಹೆಸರು ಬದಲಾಯಿಸಬೇಕಾದರೆ ನಗರಸಭೆಯಲ್ಲಿ ಠರಾವು ಸ್ವೀಕರಿಸಿ ಆ ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಹೆಸರು ಬದಲಾವಣೆಗೆ ಯಾವುದೇ ತಕರಾರು ಇಲ್ಲದಿದ್ದಲ್ಲಿ ಈ ಠರಾವನ್ನು ಸರ್ಕಾರ ವಾಪಸ್ ನಗರಸಭೆಗೆ ಕಳಿಸಿಕೊಡುತ್ತದೆ. ಆ ಬಳಿಕ ನಗರಸಭೆಯಲ್ಲಿ ಚರ್ಚೆ ನಡೆಸಿ ಮತ್ತೆ ಠರಾವು ಸ್ವೀಕರಿಸಿ ಹೆಸರು ಬದಲಾವಣೆ ಮಾಡಬಹುದಾಗಿದೆ ಎಂದು ನಗರಸಭೆ ಇಂಜಿನಿಯರ್ ಶಿವರಾಜ ತಿಳಿಸಿದರು. ಹೆಸರು ಬದಲಾವಣೆಗೆ ಠರಾವು ಸ್ವೀಕರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲು ನಿರ್ಧರಿಸಲಾಯಿತು. ಉಪಾಧ್ಯಕ್ಷ ರಮಾಕಾಂತ ಭಟ್ ಇತರರಿದ್ದರು.

ಸ್ಥಾಯಿ ಸಮಿತಿ ಆಯ್ಕೆ: ನಗರಸಭೆಗೆ ಸ್ಥಾಯಿ ಸಮಿತಿಯನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು. ದೀಪಾ ಮಹಾಲಿಂಗಣ್ಣನವರ್, ಕಿರಣ ಆನೂರಶೆಟ್ಟರ್, ಆನಂದ ಸಾಲೇರ, ರಾಘವೇಂದ್ರ ಶೆಟ್ಟಿ, ವೀಣಾ ಶೆಟ್ಟಿ, ಸಂಧ್ಯಾ ನಾಯ್ಕ, ಗಣಪತಿ ನಾಯ್ಕ. ಮಧುಕರ ಬಿಲ್ಲವ, ಶಮೀಮಾ ಬಾನು, ನೇತ್ರಾವತಿ ಹಾಗೂ ವನಿತಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಕಾಂಗ್ರೆಸ್​ನ ಯಶವಂತ ನಾಯ್ಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸ್ಥಾಯಿ ಸಮಿತಿ ಆಯ್ಕೆಗೆ ಎಲ್ಲ ಸದಸ್ಯರ ಬೆಂಬಲ ಪಡೆಯಲಾಗಿಲ್ಲ ಎಂದರು. ಮೂರು ದಿನಗಳ ಒಳಗಾಗಿ ಸ್ಥಾಯಿ ಸಮಿತಿ ಸದಸ್ಯರಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಸೂಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net