

ಯಲ್ಲಾಪುರ: ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ಸೋಮವಾರ ಆಯೊಜಿಸಿದ್ದ ಸಾಮಾನ್ಯ ಸಭೆ ಎಂದಿನಂತೆ ಗದ್ದಲ, ಗೊಂದಲ, ಗಲಾಟೆಗೆ ಸಾಕ್ಷಿಯಾಯಿತು.
ನೀರು, ಪೈಪ್ ಲೈನ್ ವಿಷಯದಲ್ಲಿ ಲೋಕೋಪಯೋಗಿ ಇಲಾಖೆಯ ದರಪಟ್ಟಿ ಡೌನ್ ಲೋಡ್ ಮಾಡಿಕೊಂಡು ಕೊಟೇಷನ್ ಹೆಸರಿನಲ್ಲಿ ಸಭೆಯ ಅನುಮೋದನೆ ಪಡೆಯಲು ಮುಂದಾಗಿದ್ದೀರಿ. ನಾವೇನು ಅಷ್ಟೂ ತಿಳಿಯದೇ ಇರುವ ಕುರಿಗಳಾ ಎಂದು ಇಂಜನಿಯರ್ ಹೇಮಚಂದ್ರ ನಾಯ್ಕ ಅವರನ್ನು ಸದಸ್ಯರಾದ ಸತೀಶ ನಾಯ್ಕ, ರಾಧಾಕೃಷ್ಣ ನಾಯ್ಕ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜನಿಯರ್, ನನ್ನನ್ನು ಅನಗತ್ಯವಾಗಿ ಟಾರ್ಗೆಟ್ ಮಾಡುತ್ತಿದ್ದೀರಿ, ಇದಕ್ಕೆ ನನ್ನ ಉತ್ತರ ಇಲ್ಲ ಎಂದರು. ಈ ವಿಷಯದಲ್ಲಿ ಮರು ಟೆಂಡರ್ ಕರೆಯುವ ಬಗ್ಗೆ ಮುಖ್ಯಾಧಿಕಾರಿ ಕುಮಾರ ನಾಯ್ಕ ಭರವಸೆ ನೀಡಿದರು.
ಬಿಲ್ಲಿಗದ್ದೆ ರಸ್ತೆ ನಿರ್ವಹಣೆಗೆ ಅನುದಾನ ಕೇಳಿದರೆ ಪಪಂ ನಲ್ಲಿ ಅನುದಾನ ಇಲ್ಲ ಎಂದು ಮುಖ್ಯಾಧಿಕಾರಿ ಲಿಖಿತವಾಗಿ ತಿಳಿಸಿದ್ದಾರೆ. ಆದರೆ ಬೇರೆ ವಾರ್ಡ್‌ಗಳ ಕಾಮಗಾರಿಗೆ ಭರಪೂರ ಕ್ರಿಯಾ ಯೋಜನೆ ಆಗುತ್ತಿದೆ ಎಂದು ಸದಸ್ಯ ರಾಜು ನಾಯ್ಕ ಆಕ್ಷೇಪಿಸಿದರು.
ಕಳೆದ ಜಾತ್ರೆ ಅಂಗಡಿ ಹರಾಜು ವಿಷಯದಲ್ಲಿ ನಡೆದ 11 ಲಕ್ಷ ರೂ. ಅವ್ಯವಹಾರದ ಕುರಿತು ಇಲಾಖಾ ತನಿಖೆಗೆ ಆಗ್ರಹಿಸಿ ಎಲ್ಲ ಸದಸ್ಯರ ಸಹಿ ಪಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಸದಸ್ಯ ಸತೀಶ ನಾಯ್ಕ ಹೇಳಿದರು.
ಪಪಂ ಆಡಳಿತ ನಡೆಸಲು ಆಗದೇ ಇದ್ದಲ್ಲಿ ಕೆಳಗೆ ಇಳಿಯಿರಿ ಎಂದು ಅಧ್ಯಕ್ಷರಿಗೆ ಸದಸ್ಯ ಸೋಮು ನಾಯ್ಕ ಹೇಳಿದಾಗ ಆಡಳಿತ ಸಮಿತಿಯ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇದಕ್ಕೆ ಉಪಾಧ್ಯಕ್ಷ ಅಮಿತ ಅಂಗಡಿ ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಯಾರು ಹಾಳು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಅಧ್ಯಕ್ಷರು ಹೇಳಿದರು. ಇಳಿಸುವುದಕ್ಕೆ, ಏರಿಸುವುದಕ್ಕೆ ನಾವು ಇದ್ದೇವೆ. ಆದರೆ ನೀವು ಹಾಗೇ ಹೇಳುವುದು ಸರಿಯಲ್ಲ ಎಂದು ಸದಸ್ಯ ರಾಧಾಕೃಷ್ಣ ನಾಯ್ಕ ಗರಂ ಆದರು. ಸದಸ್ಯ ಸತೀಶ ನಾಯ್ಕ ಮಾತನಾಡಿ, ನಿಮ್ಮದೇ ಪಕ್ಷದ ತಾಲೂಕು ಅಧ್ಯಕ್ಷರು, ಎಂಎಲ್ಸಿ ಅವರಿಗೇ ಗೌರವ ಕೊಡದ ನೀವು, ಪಪಂ ಅಧ್ಯಕ್ಷರ ಆಡಳಿತದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಿಮ್ಮ ಮಾತಿಗೆ ಇಲ್ಲಿ ಬೆಲೆ ಇಲ್ಲ ಎಂದು ವ್ಯಂಗ್ಯವಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ ಹಾಗೂ ಸದಸ್ಯರು ಭಾಗವಹಿಸಿದ್ದರು.