

ಸಿರವಾರ: ಆರು ತಿಂಗಳ ಬಳಿಕ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ಅಧ್ಯಕ್ಷ ವೈ.ಭೂಪನಗೌಡ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ತೆರಿಗೆ ಸಂಗ್ರಹ ಸೇರಿದಂತೆ ಪಪಂಗೆ ಬರುವ ಮೂಲ ಆದಾಯಗಳ ಮಾಹಿತಿ ಇಲ್ಲದ ಕಾರಣ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿಯನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಸಭೆ ಕುರಿತು ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಬೇಕು. ರಾತ್ರಿ 8 ಗಂಟೆಗೆ ಬೆಳಗ್ಗೆ ಸಾಮಾನ್ಯ ಸಭೆ ಎಂದು ಮೆಸೇಜ್ ಹಾಕುತ್ತೀರಿ ಎಂದು ಬೇಸರ ವ್ಯಕ್ತಪಡಿಸಿದರು. ವಾರ್ಡ್ ರಸ್ತೆಗಳಿಗೆ ಮಣ್ಣು ಹಾಕುತ್ತಿಲ್ಲ. ಕೆಲವೆಡೆ ಕುಡಿವ ನೀರಿನ ಸಮಸ್ಯೆ ಇದ್ದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಆರು ತಿಂಗಳ ನಂತರ ಸಾಮಾನ್ಯ ಸಭೆ ಕರೆದರೆ ಹೇಗೆ? ವಾರ್ಡ್ ಜನರ ಸಮಸ್ಯೆಗಳನ್ನು ಯಾರಿಗೆ ಹೇಳಬೇಕು. ಪ್ರತಿ ತಿಂಗಳು ಸಭೆ ಕರೆದರೆ ಅನುಕೂಲವಾಗುತ್ತದೆ ಎಂದು ಆಡಳಿತ ಪಕ್ಷದ ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪದೇಪದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ವಾರ್ಡ್ ನಂ.9, 4 ಹಾಗೂ ವಿವಿಧ ವಾರ್ಡ್‌ಗಳಲ್ಲಿ ವಿದ್ಯುತ್, ಕಂಬ, ತಂತಿಗಳ, ಪರಿವರ್ತಕ ಬದಲಾವಣೆ ಮಾಡದ ಕಾರಣ ಸದಸ್ಯರು ಜೆಸ್ಕಾಂ ಎಇಇ ಸಲೀಂ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಧ್ಯಕ್ಷ ವೈ.ಭೂಪನಗೌಡ ಮಾತನಾಡಿ, ಯಾವುದೇ ವಾರ್ಡ್‌ನಲ್ಲಿ ಕುಡಿವ ನೀರಿನ ಸಮಸ್ಯೆ ಇದ್ದರೆ ತಕ್ಷಣ ಸರಿಪಡಿಸಬೇಕು. ವಿಳಂಬ ಮಾಡಕೂಡದರು. ಅಗತ್ಯವಿರುವೆಡೆ ಕೊಳವೆಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಿ, ತೀರಾ ಸಮಸ್ಯೆ ಇದ್ದರೆ ಸ್ಥಳಕ್ಕೆ ಭೇಟಿ ನೀಡಿ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಮಾತನಾಡಿ, ಮುಂದಿನ ಸಭೆಯಲ್ಲಿ ತೆರಿಗೆ ಸೇರಿದಂತೆ ಎಲ್ಲ ವಿಭಾಗಗಳ ಪೂರ್ಣ ಮಾಹಿತಿಯೊಂದಿಗೆ ಹಾಜರಾಗಳು ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದ ಅವರು, ಸಭೆಗೆ ಗೈರಾದವರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಸದಸ್ಯರಾದ ಸಂದೀಪ್ ಪಾಟೀಲ್, ಸೂರಿ ದುರುಗಣ್ಣ, ಕೃಷ್ಣ ನಾಯಕ, ಅಮರೇಶ ಗಡ್ಲ್, ಹಸೇನ ಅಲಿ ಸಾಬ್, ಅಜಿತ್ ಹೊನ್ನಟಗಿ, ಮೌಲಸಾಬ್ ವರ್ಚಸ್ಸು, ಮಾರ್ಕಂಡಪ್ಪ, ಹಾಜೀ ಚೌದ್ರಿ, ಅಮರಮ್ಮ, ಹನುಮಂತಿ ಸೈನ್ಯ, ಪುತ್ರಮ್ಮ, ಬಸ್ಸಮ್ಮ, ಹನುಮಂತಿ ಕಜ್ಜಿ, ಖಾಜಮ್ಮ ಇತರರಿದ್ದರು.