ಮಹಾನಗರ ಪಾಲಿಕೆ ಉಪ ಚುನಾವಣೆ, ಕಮಲ ಪಾಳಯದ ಅಭ್ಯರ್ಥಿ ಗೆಲುವು ಶತಃ ಸಿದ್ಧ ಎಂದ ಬಿಜೆಪಿಗ ಸದಸ್ಯರು

PALIKE BY ELECTION BJP PRESS MEET
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ಪ್ರೇಮಾನಂದ ಬಿರಾದಾರ, ರಾಜಶೇಖರ ಮಗಿಮಠ ಮತ್ತಿತರರಿದ್ದಾರೆ.
Published on

ವಿಜಯಪುರ: ಮಹಾನಗರ ಪಾಲಿಕೆಯ ವಾರ್ಡ್ ನಂ. 29 ರ ಉಪ ಚುನಾವಣೆಯ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಗಿರೀಶ ಪಾಟೀಲ ಪರ ಉತ್ತಮ ವಾತಾವರಣವಿದ್ದು, ಗೆಲುವು ಶತಃ ಸಿದ್ಧ ಎಂದು ಬಿಜೆಪಿಯ ಮಹಾನಗರ ಪಾಲಿಕೆ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದರು.

ತಂದೆಯ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಗಿರೀಶ ಪಾಟೀಲ ಪರ ಅನುಕಂಪದ ಅಲೆಯಿದೆ. ಅಲ್ಲದೇ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಮಾಡಿದ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯಲಿವೆ. ಹೀಗಾಗಿ ಕಾಂಗ್ರೆಸ್ ಸೋಲು ನಿಶ್ಚಿತ ಎಂದು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಈಗಾಗಲೇ ವಾರ್ಡ್‌ನಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಲಾಗಿದೆ. ಜನರಿಂದ ವ್ಯಾಪಕ ಸ್ಪಂದನೆಯೂ ವ್ಯಕ್ತವಾಗಿದೆ. ನಗರ ಶಾಸಕ ಯತ್ನಾಳರ ಅಭಿವೃದ್ಧಿ ಕಾರ್ಯ ಮೆಚ್ಚಿ ಜನ ಮತ ಹಾಕುವ ವಾಗ್ದಾನ ಮಾಡಿದ್ದಾರೆ ಎಂದರು.

ಸದಸ್ಯ ರಾಜಶೇಖರ ಮಗಿಮಠ ಮಾತನಾಡಿ, ಕಾಂಗ್ರೆಸ್ ಮುಖಂಡ ಅಬ್ದುಲ್‌ರಜಾಕ್ ಹೊರ್ತಿ ಅವರ ಧರ್ಮಪತ್ನಿಯೇ ಮೇಯರ್ ಆಗಿದ್ದರೂ ನಗರದಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಪಾಲಿಕೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ತೆರಿಗೆ ಹಣದಲ್ಲಿ ಗೋಲ್‌ಮಾಲ್ ಆಗಿದೆ. ಕಟ್ಟಡ ಪರವಾನಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಜನ ಬೇಸತ್ತಿದ್ದಾರೆ. ಆದರೂ ಕಾಂಗ್ರೆಸ್ ನಾಯಕರು ಅಭಿವೃದ್ಧಿಯ ಸುಳ್ಳು ಪುರಾಣ ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.

ಸದಸ್ಯ ರಾಹುಲ್ ಜಾಧವ ಮಾತನಾಡಿ, ಕಾಂಗ್ರೆಸ್ ಮುಖಂಡರು ಸುಳ್ಳು ಪ್ರಚಾರದಲ್ಲಿ ನಿರತರಾಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಸಚಿವ ಎಂ.ಬಿ. ಪಾಟೀಲರು ಸಹ ನಗರಕ್ಕೆ ಅನುದಾನ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಅನುದಾನಕ್ಕಾಗಿ ಸಾಕಷ್ಟು ಬಾರಿ ಮನವಿ ಮಾಡಿದರೂ ಈವರೆಗೂ ಅನುದಾನ ಬಂದಿಲ್ಲ ಎಂದರು.

ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಪಾಲಿಕೆ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್‌ನವರಿಗೆ ಜನರ ಮುಂದೆ ಹೋಗಲು ಹಾದಿಯಿಲ್ಲ. ಹೇಳಿಕೊಳ್ಳಲು ಅಭಿವೃದ್ಧಿ ಕಾಮಗಾರಿಗಳಿಲ್ಲ. ನಗರದಲ್ಲಿ ಅಭಿವೃದ್ಧಿ ಏನಾದರೂ ಆಗಿದ್ದರೆ ಅದು ಶಾಸಕ ಬಸನಗೌಡ ಪಾಟೀಲ ಯತ್ನಾಳರಿಂದ ಮಾತ್ರ ಎಂದರು.

ಅಭ್ಯರ್ಥಿ ಗಿರೀಶ ಪಾಟೀಲ ಮಾತನಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶಿಫಾರಸ್ಸು ಮಾಡಿದ ಹಿನ್ನೆಲೆ ವಿದ್ಯುತ್ ಸೌಲಭ್ಯ, ಸಿಸಿ ರಸ್ತೆ ಮತ್ತಿತರ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಅದರ ಹೊರತು ಕಾಂಗ್ರೆಸ್ ನಾಯಕರು ನಯಾ ಪೈಸೆ ಹಣ ತಂದು ಅಭಿವೃದ್ಧಿ ಮಾಡಿಲ್ಲ. ನನ್ನ ತಂದೆಯವರ ಇಚ್ಛಾಶಕ್ತಿ, ಜನಪರ ನೀತಿಯಿಂದಾಗಿ ಜನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ವಿಶ್ವಾಸ ಇದೆ ಎಂದರು.

ಪಾಲಿಕೆ ಸದಸ್ಯರಾದ ಎಂ.ಎಸ್. ಕರಡಿ, ಜವಾಹರ ಗೋಸಾವಿ, ರಾಜಶೇಖರ ಕುರಿಯವರ, ಮಲ್ಲಿಕಾರ್ಜುನ ಗಡಗಿ, ಬಸವರಾಜ ಕೋರಿ, ಮಹೇಶ ಒಡೆಯರ, ಕಿರಣ ಪಾಟೀಲ, ವಿಠ್ಠಲ್ ಹೊಸಪೇಟೆ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಪಾಪುಸಿಂಗ್ ರಜಪೂತ, ವಿಜಯ ಜೋಶಿ, ಚಂದ್ರು ಕಲ್ಬುರ್ಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net