ಮೊಗೇರ ಸಮಾಜದ ಬಾಂಧವರು ಶೈಕ್ಷಣಿಕ, ಆರ್ಥಿಕವಾಗಿ ಸಬಲರಾಗಬೇಕು

21adarshkdga5
Published on

ಮಡಿಕೇರಿ: ಮೊಗೇರ ಸಮಾಜದ ಬಾಂಧವರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಬೇಕು ಎಂದು ಶನಿವಾರಸಂತೆ ಉಪ ತಹಶೀಲ್ದಾರ್ ತುಕ್ರಪ್ಪ ಹೇಳಿದರು.


ಕೊಡಗು ಜಿಲ್ಲಾ ಮೊಗೇರಾ ಸೇವಾ ಸಮಾಜ ಹಾಗೂ ಮೊಗೇರ ಗ್ರಾಮ ವಿಕಾಸ ಯೋಜನೆಯ ಜಿಲ್ಲಾ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಸುಂಟಿಕೊಪ್ಪದ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಮೊಗೇರ ಸೇವಾ ಸಮಾಜವು ಗ್ರಾಮ ವಿಕಾಸ ಯೋಜನೆಯ ಮೂಲಕ ಸ್ವಸಹಾಯ ಸಂಘವನ್ನು ಆರಂಭಿಸಿ ಆರ್ಥಿಕವಾಗಿ ದುರ್ಬಲರಾದವರಿಗೆ ಹಣಕಾಸಿನ ಬಲ ತುಂಬುತ್ತಿರುವುದು ಶ್ಲಾಘನೀಯ. ಮೊಗೇರ ಸಮಾಜದ ಬಾಂಧವರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಬೇಕು. ಸಮಾಜಕ್ಕೆ ಸೇರಿದ ನೌಕರ ಬಾಂಧವರು ಬಡ ಕುಟುಂಬಗಳಿಗೆ ಆರ್ಥಿಕ ಸಹಕಾರವನ್ನು ನೀಡಬೇಕೆಂದು ಕರೆ ನೀಡಿದರು.


ಸಮಾಜದ ರಾಜ್ಯ ಉಪಾಧ್ಯಕ್ಷ ಬಿ.ಶಿವಪ್ಪ ಮಾತನಾಡಿ, ಕೊಡಗಿನ ಮೊಗೇರ ಬಾಂಧವರು ಸಂಘದ ಸದಸ್ಯತ್ವ ಪಡೆಯುವ ಮೂಲಕ ಮೊಗೇರ ಜನಸಂಖ್ಯೆ ಗುರುತಿಸಲು ಸಹಕರಿಸುವಂತೆ ಕೋರಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ, ಕಡು ಬಡತನದಲ್ಲಿರುವ ಮೊಗೇರ ಜನರ ಆರ್ಥಿಕ ಪುನಶ್ಚೇತನಕ್ಕಾಗಿ ಮೊಗೇರ ಗ್ರಾಮ ವಿಕಾಸ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದೆ. ಹಂತ ಹಂತವಾಗಿ ಜನಾಂಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ೨ ರಿಂದ ೪ ಮೊಗೇರ ಸೇವಾ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಅವರ ಮೂಲಕ ಸಮುದಾಯದ ನಿಖರವಾದ ಜನಸಂಖ್ಯೆ, ಶೈಕ್ಷಣಿಕ ಪ್ರಗತಿ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲಾಗುವುದು. ಅಗತ್ಯಕ್ಕೆ ತಕ್ಕಂತೆ ದಾನಿಗಳು ಹಾಗೂ ಸಮಾಜದ ಮೂಲಕ ನೆರವು ನೀಡಲಾಗುವುದು. ಶೀಘ್ರ ಮೊಗೇರ ವಿವಿಧೋದ್ದೇಶ ಸಹಕಾರ ಸಂಘವನ್ನು ಸ್ಥಾಪಿಲಾಗುವುದು ಎಂದರು.


ಮತಗಳಿಕೆಗೆ ಮಾತ್ರ ಸೀಮಿತ: ರಾಜಕಾರಣಿಗಳು ನಮ್ಮ ಸಮುದಾಯವನ್ನು ಕೇವಲ ಮತಗಳಿಕೆಗೆ ಮಾತ್ರ ಸೀಮಿತಗೊಳಿಸಿದ್ದು, ಯಾವುದೇ ಬೇಡೆಕೆಯನ್ನು ಈಡೇರಿಸುವ ಮನಸ್ಸು ಮಾಡುತ್ತಿಲ್ಲ. ಸಮಾಜದ ಸಮುದಾಯಭವನ ಮತ್ತು ಶೈಕ್ಷಣಿಕ ಸಂಸ್ಥೆ ಸ್ಥಾಪನೆಗಾಗಿ ಸ್ಥಳಾವಕಾಶ ಕೋರಿದರು ಯಾವುದೇ ರೀತಿಯ ಸ್ಪಂದನೆಯನ್ನು ಶಾಸಕರು ಹಾಗೂ ಜಿಲ್ಲಾಡಳಿತ ನೀಡಿಲ್ಲ. ಇತ್ತೀಚೆಗೆ ನಡೆದ ನಿವೇಶನ ರಹಿತರ ಹೋರಾಟಕ್ಕೂ ಕೂಡ ಪ್ರತಿಕ್ರಿಯೆ ದೊರೆಯಲಿಲ್ಲ ಎಂದು ಆರೋಪಿಸಿದರು.


ಚುನಾವಣೆ ಸಮೀಪಿಸುತ್ತಿರುವುದರಿಂದ ಆದಷ್ಟು ಶೀಘ್ರ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ವಿವಿಧ ಸಂಘಟನೆಗಳ ಸಮಾನ ಮನಸ್ಕರ ಸಭೆ ಕರೆದು ಮತದಾನಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗುವುದೆಂದು ಗೌತಮ್ ಶಿವಪ್ಪ ತಿಳಿಸಿದರು.


ದೇವಯ್ಯ ಕಾಂಪ್ಲೆಕ್ಸ್‌ನಲ್ಲಿ ನೂತನ ಕಚೇರಿಯನ್ನು ಮೊಗೇರ ಸಂಘದ ಸ್ಥಾಪಕ ಸದಸ್ಯರಾದ ಅಕ್ಕಮ್ಮ ಮೂರ್ತಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಪ.ಪಂ ಅಧ್ಯಕ್ಷ ಪಿ.ಕೆ.ಚಂದ್ರು ಹಾಗೂ ಮಾಜಿ ಅಧ್ಯಕ್ಷ ಪಿ.ಎಂ.ರವಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ದೇವಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷ ಪಿ.ಜಿ.ಗಣೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸುರೇಶ್, ಕೊಡಗು ಗ್ರಾಮೀಣ ಬ್ಯಾಂಕ್ ಉದ್ಯೋಗಿ ಲೋಕಯ್ಯ, ಮದೆನಾಡು ಗ್ರಾ.ಪಂ ಉಪಾಧ್ಯಕ್ಷೆ ಚಂದ್ರಾವತಿ, ಮಡಿಕೇರಿ ತಾಲೂಕು ಅಧ್ಯಕ್ಷ ದಿನೇಶ್ ಉಡೋತ್, ಸೋಮವಾರಪೇಟೆ ಅಧ್ಯಕ್ಷ ದಿನೇಶ್ ಕೆಂಚಬಾಣೆ, ವಿರಾಜಪೇಟೆ ತಾಲೂಕು ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net