

ರಬಕವಿ/ಬನಹಟ್ಟಿ: ರಬಕವಿ-ಬನಹಟ್ಟಿ ಅವಳಿ ನಗರಸಭೆಯ ಮೊದಲ ಅವಧಿ ಮುಕ್ತಾಯವಾಗಿ ಮೂರು ತಿಂಗಳು ಕಳೆದಿವೆ. ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯತ್ತ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ.
ಮೊದಲ ಅವಧಿ ಮುಕ್ತಾಯದ ಬಳಿಕ ನಗರಸಭೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವಳಿ ನಗರದ ನಗರಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿರುವ ಕಾರಣ ಮೊದಲ ಎರಡೂವರೆ ವರ್ಷದ ಅವಧಿಯಲ್ಲಿ ಬನಹಟ್ಟಿಯ ಶ್ರೀಶೈಲ ಬೀಳಗಿ, ನಂತರ ರಬಕವಿಯ ಸಂಜಯ ತೆಗ್ಗಿ ಅವರಿಗೆ ಅಧ್ಯಕ್ಷ ಸ್ಥಾನದ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಎರಡನೇ ಅವಧಿಗೂ ಬಿಜೆಪಿ ಸದಸ್ಯರೇ ಅಧ್ಯಕ್ಷ-ಉಪಾಧ್ಯಕ್ಷರಾಗಿ ಅಧಿಕಾರ ನಡೆಸುವುದು ಪಕ್ಕಾ ಆಗಿದೆ.
ಇದನ್ನೂ ಓದಿ: ವಿವಿಧ ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆ
ಪಕ್ಷಗಳ ಬಲಾಬಲ: ನಗರಸಭೆಯಲ್ಲಿ 31 ಸದಸ್ಯರು, ಶಾಸಕರ ಹಾಗೂ ಸಂಸದರ ತಲಾ ಒಂದು ಮತ ಸೇರಿ ಒಟ್ಟು 33 ಮತಗಳಿವೆ.
ಅಧಿಕಾರ ಹಿಡಿಯಲು 17 ಮತಗಳ ಅಗತ್ಯವಿದೆ. ಬಿಜೆಪಿ-24, ಕಾಂಗ್ರೆಸ್-5, ಪಕ್ಷೇತರ ಇಬ್ಬರು ಸದಸ್ಯರಿದ್ದಾರೆ.
ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಪಕ್ಷೇತರ ಸದಸ್ಯರಾದ ಗೌರಿ ರಮೇಶ ಮಿಳ್ಳಿ ಹಾಗೂ ಶೋಭಾ ಪರಶುರಾಮ ಕೊಕ್ಕನವರ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದು, ಹೀಗಾಗಿ ಕಮಲ ಪಕ್ಷ ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಯಾವುದೇ ಅಡೆತಡೆಗಳಿಲ್ಲ.
ಮೀಸಲಾತಿ ಯಾವ ಸಮುದಾಯಕ್ಕೆ?: ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಈ ಬಾರಿ ಯಾವ ಸಮುದಾಯಕ್ಕೆ ಮೀಸಲಾತಿ ಒಲಿಯಲಿದೆ ಎಂದು ಆಕಾಂಕ್ಷಿಗಳು ಎದುರು ನೋಡುತ್ತಿದ್ದಾರೆ.