

ನರೇಗಲ್ಲ: ಆಡಳಿತದ ವಿಚಾರದಲ್ಲಿ ಪಪಂ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಪಟ್ಟಣ ಪಂಚಾಯಿತಿಯ ಸದಸ್ಯರೆಲ್ಲ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಸಮ್ಮುಖದಲ್ಲೇ ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕ ಸಭೆ ಮುಗಿಸಿ ಅಧ್ಯಕ್ಷರ ಕೋಣೆಯಲ್ಲಿ ಕುಳಿತಿದ್ದ ಪಟ್ಟಣ ಪಂಚಾಯಿತಿ ಸದಸ್ಯರೆಲ್ಲರನ್ನು ತಹಸೀಲ್ದಾರರು ಭೇಟಿಯಾಗಲು ಬಂದಾಗ ಈ ಪ್ರಸಂಗ ನಡೆಯಿತು.
ಪಟ್ಟಣ ಪಂಚಾಯಿತಿಯಲ್ಲಿ ಶನಿವಾರ ಸಂತೆ ಸ್ಥಳ ನಿಗದಿಗಾಗಿ ಸಾರ್ವಜನಿಕ ಸಭೆ ಇರುವುದನ್ನು ತಿಳಿದುಕೊಂಡು ಬಂದಿದ್ದ ಸದಸ್ಯರೆಲ್ಲರೂ ಅಧ್ಯಕ್ಷರ ಕೊಠಡಿಯಲ್ಲಿ ಕುಳಿತಿದ್ದರು. ಪಟ್ಟಣ ಪಂಚಾಯಿತಿಗೆ ಬಂದ ತಮ್ಮನ್ನು ಗಮನಿಸದೆ, ಸಾರ್ವಜನಿಕ ಸಭೆಗೂ ಆಹ್ವಾನಿಸದೆ ಮುಖ್ಯಾಧಿಕಾರಿ ಅವಮಾನಿಸಿದ್ದಾರೆ. ಬೇರೆಯವರ ಕಡೆಯಿಂದ ಹೇಳಿಕಳಿಸುವ ಮೂಲಕ ಅವಮಾನಿಸುತ್ತಿದ್ದಾರೆ ಎಂದು ಸದಸ್ಯರು ದೂರಿದರು.
ಸಂತೆ ಸ್ಥಳದ ಸ್ಥಳಾಂತರ ವಿಷಯದಲ್ಲಿ ಊರಿನಲ್ಲಿ ಎರಡು ಗುಂಪುಗಳನ್ನು ಮುಖ್ಯಾಧಿಕಾರಿಗಳು ಮಾಡಿದ್ದಾರೆ ಎಂದು ಶ್ರೀಶೈಲಪ್ಪ ಬಂಡಿಹಾಳ ದೂರಿದರು. ಸಂತೆಯನ್ನು ಸ್ಥಳಾಂತರಿಸುವ ಬಗ್ಗೆ ಅವರು ಯಾವ ಸದಸ್ಯರೊಂದಿಗೂ ಚರ್ಚಿಸಿಲ್ಲ. ಈ ವಿಷಯ ನಮಗೆ ಗೊತ್ತೇ ಇಲ್ಲ ಎಂದು ಸದಸ್ಯ ದಾವೂದಲಿ ಕುದರಿ ಆಕ್ರೋಶ ಹೊರಹಾಕಿದರು. ಸದಸ್ಯ ಮಾಲಗಿತ್ತಿಮಠ ಸೇರಿ ಅನೇಕರು ದೂರು, ಸಮಸ್ಯೆಗಳನ್ನು ಹೇಳಿಕೊಂಡರು.
ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಮಾತನಾಡಿ, ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ಕಾರ್ಯವನ್ನು ಮುಖ್ಯಾಧಿಕಾರಿ ನಿರ್ವಹಿಸುವಂತಿಲ್ಲ. ಈ ಸಭೆಯಲ್ಲಿ ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಲಿ. ಇದರಿಂದ ಆಡಳಿತದ ಬಂಡಿ ಸುಗಮವಾಗಿ ಸಾಗಲು ಅನುಕೂಲವಾಗುತ್ತದೆ. ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.