

ನಂಜನಗೂಡು: ಸತತ ಒಂದೂವರೆ ವರ್ಷದ ಬಳಿಕ ಇಲ್ಲಿನ ನಗರಸಭೆಯಲ್ಲಿ ನೂತನ ಅಧ್ಯಕ್ಷ ಶ್ರೀಕಂಠ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು.
ಪಟ್ಟಣದಲ್ಲಿರುವ ನಗರಸಭಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ನೇತೃತ್ವ ವಹಿಸಿದ್ದರು. ಒಂದೂವರೆ ವರ್ಷದಿಂದ ನಗರಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಲ್ಲದೆ ಅಧಿಕಾರಿಗಳದ್ದೇ ದರ್ಬಾರ್ ಆಗಿದ್ದು, ಇದೀಗ ಅದಕ್ಕೆ ತೆರೆ ಬಿದ್ದಂತಾಗಿದೆ.
ಸಭೆ ಆರಂಭವಾಗುತ್ತಿದ್ದಂತೆ ಎಲ್ಲ ವಾರ್ಡ್‌ಗಳ ಸದಸ್ಯರು ಅಧಿಕಾರಿಗಳ ವಿರುದ್ಧ ಸಿಡಿದೆದ್ದರು. ಅಧಿಕಾರಿಗಳು ಯಾವುದೇ ಸದಸ್ಯರ ಮಾತಿಗೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಅರ್ಧಂಬರ್ಧ ನಡೆದ ಕಾಮಗಾರಿಗಳಿಗೆ ಪೂರ್ತಿ ಬಿಲ್ ಮಾಡಿಕೊಂಡಿದ್ದಾರೆ. ಕಾಮಗಾರಿಯ ಕ್ರಿಯಾ ಯೋಜನೆಗಿಂತ ದುಪ್ಪಟ್ಟು ಲೆಕ್ಕ ತೋರಿಸುತ್ತಿದ್ದಾರೆ. ಇದು ಸದಸ್ಯರ ಗಮನಕ್ಕೂ ಬಂದಿಲ್ಲ. ಯಾವುದೇ ಅನುಮತಿ ನೀಡದೆ ಹೋಟೆಲ್, ಲಾಡ್ಜ್ ಹಾಗೂ ಕಮರ್ಷಿಯಲ್ ಮಳಿಗೆಗಳಿಂದ ಅಕ್ರಮವಾಗಿ ಹಣ ಪಡೆದು ಅವುಗಳನ್ನು ನಡೆಸಲು ಸಹಕರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪಟ್ಟಣದಲ್ಲಿ ನಾಯಿಗಳನ್ನು ಹಿಡಿಯಲು 40 ಲಕ್ಷ ರೂ. ಲೆಕ್ಕ ತೋರಿಸಿದ್ದಾರೆ. ಇದನ್ನು ನೋಡಿದರೆ ನಗರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಯಿ ಹಿಡಿಯುವುದೇ ವಾಸಿ ಎಂದು ಸದಸ್ಯ ಕಪಿಲೇಶ್ ಛೇಡಿಸಿದರು. ಇಂತಹ ಹತ್ತು ಹಲವಾರು ಕಾರಣಗಳಿ ಗಾಗಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಇವೆಲ್ಲವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಸದಸ್ಯರು ಶಾಸಕರಿಗೆ ಮನವಿ ಮಾಡಿದರು.
ಅಧಿಕಾರಿಗಳ ಅಕ್ರಮಗಳನ್ನು ಸಕ್ರಮಗೊಳಿಸುವ ಸಭೆ ಇದಾಗಿದೆ ಎಂದು ಅಧಿಕಾರಿಗಳ ಅಕ್ರಮಗಳನ್ನು ಸದಸ್ಯರು ಎಳೆಎಳೆಯಾಗಿ ಬಿಚ್ಚಿಟ್ಟರು. ಎಲ್ಲ ಸದಸ್ಯರ ಆರೋಪಗಳನ್ನು ಆಲಿಸಿದ ಶಾಸಕರು, ನನಗೂ ಕೂಡ ಇದರಲ್ಲಿ ಅಕ್ರಮ ಅವ್ಯವಹಾರ ನಡೆದಿದೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಅದಕ್ಕಾಗಿ ತಮ್ಮೆಲ್ಲರ ಸಹಕಾರದಿಂದ ಇದನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಸದಸ್ಯರಿಗೆ ಆಶ್ವಾಸನೆ ನೀಡಿದರು. ಅಲ್ಲದೆ ಕೆಲವು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲು ಮುಂದಾದ ಶಾಸಕರಿಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಾರದ ಕಾರಣ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಚಳಿ ಬಿಡಿಸಿದರು. ಮುಂಬರುವ ದಿನಗಳಲ್ಲಿ ಎಲ್ಲ ವಾರ್ಡ್‌ಗಳಿಗೂ ಭೇಟಿ ಕೊಟ್ಟು ಸದಸ್ಯರು ಹೇಳಿದ ಕೆಲಸ ಕಾರ್ಯಗಳನ್ನು ಚಾಚೂ ತಪ್ಪದೇ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ಒತ್ತುವರಿಯಾಗಿದೆ. ಕೂಡಲೇ ಅದನ್ನು ತೆರವುಗೊಳಿಸಬೇಕು. 31 ವಾರ್ಡ್‌ಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಅಲ್ಲದೆ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ, ದೂರು ನೀಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ವಾರ್ಡ್‌ಗಳಲ್ಲಿ ಯುಜಿಡಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಹಲವರು ತಮ್ಮ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.
ಸಾಕಷ್ಟು ಬಡಾವಣೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಸಿಗುತ್ತಿಲ್ಲ. ಹೈಟೆಕ್ ಶೌಚಗೃಹದ ಹೆಸರಿನಲ್ಲಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಚರಂಡಿಯ ಕೊಳಚೆ ನೀರು ಕಪಿಲಾ ನದಿ ಸೇರುತ್ತಿದೆ. ಅಲ್ಲದೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅದನ್ನು ತಡೆಗಟ್ಟುವಲ್ಲಿ ನಗರಸಭಾ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
ಆದಷ್ಟು ಬೇಗ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿರುವ ದೂರುಗಳನ್ನು ಬಗೆಹರಿಸಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಮತ್ತು ನಗರಸಭಾಧ್ಯಕ್ಷ ಶ್ರೀಕಂಠು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರಸಭಾ ಆಯುಕ್ತ ನಂಜುಂಡಸ್ವಾಮಿ, ಉಪಾಧ್ಯಕ್ಷೆ ರಿಯಾನಾ ಬಾನು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.