ಸ್ವಚ್ಛತೆ ಮೂಲಕ ಪಾಲಿಕೆ ಸದಸ್ಯೆ ಪ್ರತಿಭಟನೆ

9
Published on

ಮೈಸೂರು: ಪೌರಕಾರ್ಮಿಕರ ಕೊರತೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನಗರಪಾಲಿಕೆಯ 61ನೇ ವಾರ್ಡ್ (ವಿದ್ಯಾರಣ್ಯಪುರಂ)ನ ಸದಸ್ಯೆ ಭಾನುವಾರ ತನ್ನ ಇಡೀ ಕುಟುಂಬದೊಂದಿಗೆ ಬೀದಿಗಿಳಿದು ಸ್ವಚ್ಛತಾ ಕೆಲಸ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

61ನೇ ವಾರ್ಡ್ ಸದಸ್ಯೆ ಶೋಭಾ ಸುನೀಲ್, ತಮ್ಮ ಪತಿ, ನಗರ ಪಾಲಿಕೆ ಮಾಜಿ ಸದಸ್ಯ ಸುನೀಲ್, ಮಕ್ಕಳಾದ ಪ್ರಿಯಾಂಕಾ, ಅಶ್ವಿನಿ, ಲಕ್ಷ್ಮೀ ಹಾಗೂ ಮಾದೇಶ್ ಜತೆ ವಿದ್ಯಾರಣ್ಯಪುರಂನ ಒಕ್ಕಲಿಗರ ಹಾಸ್ಟೆಲ್ ಸುತ್ತಮುತ್ತ ಸ್ವಚ್ಛತಾ ಕಾರ್ಯ ಹಾಗೂ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಮೂಲಕ ಪ್ರತಿಭಟನೆ ನಡೆಸಿದರು.

ವಾರ್ಡ್ ವ್ಯಾಪ್ತಿಗೆ ವಿದ್ಯಾರಣ್ಯಪುರಂ, ವಿಶ್ವೇಶ್ವರಯ್ಯ ನಗರ ಮೊದಲ ಹಂತ, ಸಾರ್ವಜನಿಕ ಹಾಸ್ಟೆಲ್ ರಸ್ತೆ ಸುತ್ತಮುತ್ತ ಸೇರಿದಂತೆ ಅನೇಕ ಬಡಾವಣೆಗಳು ಸೇರುತ್ತವೆ. ವಾರ್ಡ್‌ನಲ್ಲಿ 16 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಅಗತ್ಯಕ್ಕನುಗುಣವಾಗಿ ಪೌರಕಾರ್ಮಿಕರಿಲ್ಲ. 61ನೇ ವಾರ್ಡ್‌ನಲ್ಲಿ ಕೆಲಸ ನಿರ್ವಹಿಸಲು 30 ಪೌರಕಾರ್ಮಿಕರು ಬೇಕಾಗಿದ್ದಾರೆ ಶೋಭಾ ಸುನೀಲ್ ಎಂದು ಆಗ್ರಹಿಸಿದರು.

ಎರಡು ತಿಂಗಳ ಹಿಂದೆ ವಾರ್ಡ್‌ನಲ್ಲಿ 8 ಪುರುಷರು ಹಾಗೂ 16 ಮಹಿಳೆಯರು ಸೇರಿದಂತೆ 24 ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಸದ್ಯ ಈ ಪೈಕಿ 4 ಪುರುಷರು ನಿಧನರಾಗಿದ್ದಾರೆ. ಒಬ್ಬರು ನಿವೃತ್ತರಾಗಿದ್ದಾರೆ. ಇನ್ನೊಬ್ಬ ಆಸ್ಪತ್ರೆಯಲ್ಲಿದ್ದಾನೆ. ಜತೆಗೆ ಪ್ರತಿ ದಿನ ಇಬ್ಬರು ರಜೆಯಲ್ಲಿರುತ್ತಾರೆ. ಹೀಗಾಗಿ ವಾರ್ಡ್ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಕಷ್ಟವಾಗಿದೆ. ಇಷ್ಟೇ ಪೌರಕಾರ್ಮಿಕರನ್ನು ಮನೆ ಮನೆಗೆ ಹೋಗಿ ಕಸ ಸಂಗ್ರಹಿಸಲು ಹಾಗೂ ರಸ್ತೆ, ಪಾರ್ಕ್, ಒಳಚರಂಡಿಗಳನ್ನು ಸ್ವಚ್ಛ ಮಾಡಲು ಬಳಸಿಕೊಳ್ಳಬೇಕಿದೆ. ಹೀಗಾಗಿ, ಹೆಚ್ಚುವರಿ ಪೌರಕಾರ್ಮಿಕರನ್ನು ನೀಡುವಂತೆ ಅಧಿಕಾರಿಗಳ ಬಳಿ ಅನೇಕ ಬಾರಿ ಮನವಿ ಮಾಡಲಾಗಿದೆ. ಕೌನ್ಸಿಲ್ ಸಭೆಯಲ್ಲೂ ಈ ವಿಷಯವಾಗಿ ಚರ್ಚೆ ಮಾಡಿದ್ದೇನೆ. ಆದರೂ ಇದು ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net